ತಾನೇ ದೂರು ನೀಡಿ,ನ್ಯಾಯಾಲಯದಲ್ಲಿ ಆರೋಪಿಯ ಪರವಾಗಿ ಸುಳ್ಳು ಸಾಕ್ಷಿ ನುಡಿದ ದೂರುದಾರನಿಗೆ ಜಡಿಯಿತು ಕ್ರಿಮಿನಲ್ ಕೇಸ್
ಮಂಡ್ಯ: ಲೋಕಾಯುಕ್ತ ಪೊಲೀಸರನ್ನು ಕರೆಸಿ ಲಂಚ ಪಡೆದುಕೊಳ್ಳುತ್ತಿದ್ದ ಅಧಿಕಾರಿಯನ್ನು ಬಲೆಗೆ ಕೆಡವಿಸಿದ ದೂರುದಾರ, ಆ ಬಳಿಕ ಕೋರ್ಟ್ ನಲ್ಲಿ ಆರೋಪಿಯ ಪರವಾಗಿ ಸುಳ್ಳು ಸಾಕ್ಷಿ ನುಡಿದು ಕ್ರಿಮಿನಲ್ ಮೊಕದ್ದಮೆಯನ್ನು ತನ್ನ ಮೇಲೆಯೇ ಹಾಕಿಸಿಕೊಂಡ ಘಟನೆ ಮಂಡ್ಯ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ.
ಘಟನೆ ವಿವರ: ದೂರುದಾರ ನಗರದ ಗುತ್ತಲೂ ಬಡಾವಣೆಯ ರವಿಕುಮಾರ್ ಎಂಬಾತ 2014 ರಲ್ಲಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಯಾಗಿದ್ದ ಯೋಗಾನಂದ ಎಂಬವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದನು.ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ಯೋಗಾನಂದರನ್ನು ಲಂಚ ಪಡೆದುಕೊಳ್ಳುವಾಗಲೇ ಬಂಧಿಸಿ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುವ ಸಂದರ್ಭ ದೂರುದಾರ ಆರೋಪಿಯ ಜೊತೆಗೆ ಶಾಮೀಲಾಗಿ ಸಾಕ್ಷಿ ನುಡಿದಿದ್ದು ಆರೋಪಿಯ ಬಿಡುಗಡೆಗೆ ಸಹಕರಿಸಿದ್ದ.ಈ ಬಗ್ಗೆ ಸುಳ್ಳು ಸಾಕ್ಷಿ ನುಡಿದ ದೂರುದಾರ ರವಿಕುಮಾರ್ ವಿರುದ್ಧವೇ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕೋರ್ಟ್ ಆದೇಶ ಹೊರಡಿಸಿದ್ದು,ಈ ಮೊದಲು ಕೂಡ ಈತ ಇಂತಹ ಪ್ರಕರಣ ದಾಖಲಿಸಿ ಆ ಬಳಿಕ ಆರೋಪಿತರ ಪರವಾಗಿ ಸಾಕ್ಷಿ ನುಡಿದಿದ್ದ ಬಗ್ಗೆ ಪ್ರಾಸಿಕ್ಯೂಷನ್ ಪರವಾಗಿ ವಕೀಲರು ವಾದ ಮಂಡಿಸಿದ್ದರು.
ಸದ್ಯ ಲೋಕಾಯುಕ್ತ ಹಾಗೂ ಎಸಿಬಿ ಯನ್ನು ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ದೂರುದಾರನ ವಿರುದ್ಧವೇ ಪ್ರಕರಣ ದಾಖಲಾಗಿದೆ.