ಹಣದಾಸೆಗೆ ಆನ್ಲೈನ್ ಮೂಲಕ ಕಿಡ್ನಿ ಮಾರಾಟ ಮಾಡಲು ಹೋದ ವ್ಯಕ್ತಿಗೆ ಮೋಸ |ಗೂಗಲ್ ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯಿಂದ ಮಕ್ಮಲ್ ಟೋಪಿ| ಕಿಡ್ನಿ ಮಾರಾಟಕ್ಕೆ ಹೋಗಿ ಕಳೆದುಕೊಂಡಿದ್ದು ಬರೋಬ್ಬರಿ 86 ಲಕ್ಷ
ಮಾನವನ ಪ್ರತಿಯೊಂದು ಅಂಗಗಳಿಗೆ ಬೆಲೆ ಇದೆ. ಕೆಲವರು ತಮ್ಮ ಕಾಲಾನಂತರ ದೇಹ ದಾನ ಮಾಡುತ್ತಾರೆ. ಹಾಗಾಗಿ ಮನುಷ್ಯನ ಪ್ರತಿಯೊಂದು ಅಂಗಗಳೂ ಇಂಪಾರ್ಟೆಂಟ್. ಈಗ ನಾವು ಇಲ್ಲಿ ಮಾತಾಡೋಕೆ ಹೊರಟಿರೋದು ಮನುಷ್ಯನ ಅತಿ ಮುಖ್ಯ ಅಂಗ ಕಿಡ್ನಿ ಬಗ್ಗೆ. ಕುಟುಂಬದಲ್ಲಿ ಕೆಲವರಿಗೆ ಕಿಡ್ನಿ ಸಮಸ್ಯೆ ಇದ್ದರೆ ಮನೆ ಮಂದಿಯ ಕೆಲವರು ತಮ್ಮ ಕಿಡ್ನಿ ದಾನ ಮಾಡುತ್ತಾರೆ. ಹಾಗೆಯೇ ಈ ಕಿಡ್ನಿಯನ್ನು ಕೆಲವರು ಮಾರಾಟ ಮಾಡಿ ಹ ಸಂಪಾದನೆಗೂ ಬಳಸಿಕೊಳ್ಳುತ್ತಾರೆ. ತಮಗೆ ದುಡ್ಡಿನ ಸಮಸ್ಯೆ ಕಾಡಿದರೆ ಮನುಷ್ಯ ಕಿಡ್ನಿ ಮಾರಿ ಹಣ ಸಂಪಾದಿಸುವುದು ಅನಂತರ ಮೋಸ ಹೋಗುವುದು ಇಂತಹ ಅನೇಕ ಪ್ರಕರಣಗಳನ್ನು ನಾವು ಓದಿದ್ದೇವೆ. ಈಗ ಅಂತದ್ದೇ ಪ್ರಕರಣ ನಾವು ಇಲ್ಲಿ ಕಾಣಬಹುದು. ಆನ್ಲೈನ್ ನಲ್ಲಿ ಕಿಡ್ನಿ ಮಾರಾಟ ಮಾಡಿದರೆ ಕೋಟಿ ಹಣ ಸಿಗುತ್ತದೆ ಎಂಬ ಸುದ್ದಿ ನಂಬಿದ ವ್ಯಕ್ತಿಯೊಬ್ಬ ಕಿಡ್ನಿ ಮಾರಲು ಹೋಗಿದ್ದಾನೆ. ಈ ಮೋಸದ ಜಾಲಕ್ಕೆ ಸಿಲುಕಿ ಈ ವ್ಯಕ್ತಿ ಕಳೆದುಕೊಂಡಿದ್ದು ಬರೋಬ್ಬರಿ 86 ಲಕ್ಷ.
ರಾಜಾಜಿನಗರದ 38 ವರ್ಷದ ವ್ಯಕ್ತಿ ಹಣ ಕಳೆದುಕೊಂಡ ವ್ಯಕ್ತಿ. ಅಭಿಜಿತ್ ಎಂಬುವವರಿಂದ ಮೋಸ ಹೋಗಿದ್ದಾರೆ. ಹಣಕಾಸಿನ ಸಮಸ್ಯೆ ಇರುವ ವ್ಯಕ್ತಿಗೆ ಗೂಗಲ್ ನಲ್ಲಿ ಅಭಿಜಿತ್ ನ ಪರಿಚಯವಾಗಿದೆ. ನಂತರ ಚಾಟಿಂಗ್ ನಡೆದು ಸ್ನೇಹದಿಂದ ಈ ವ್ಯಕ್ತಿ ಹಣಕಾಸಿನ ಸಮಸ್ಯೆ ಬಗ್ಗೆ ಮಾತಾಡಿಕೊಂಡಿದ್ದಾರೆ. ಆಗ ಅಭಿಜಿತ್ ನೀವು ನಿಮ್ಮ ಕಿಡ್ನಿ ಮಾರಿದರೆ ಕೈ ತುಂಬಾ ಹಣ ಸಿಗುತ್ತೆ. ಆಗ ನಿಮ್ಮ ಆರ್ಥಿಕ ಸಮಸ್ಯೆ ಕಡಿಮೆ ಆಗಬಹುದು ಎಂದು ಹೇಳಿದ್ದಾನೆ. ಹಣದಾಸೆಗೆ ಬಿದ್ದು ವ್ಯಕ್ತಿ ಅಭಿಜಿತ್ ನ ಮಾತನ್ನು ನಂಬಿದ್ದಾನೆ.
ಅನಂತರ ನಡೆದದ್ದೇ ಮೋಸದ ಜಾಲ. ಕಿಡ್ನಿ ಮಾರಾಟ ಮಾಡಲು ನನಗೆ ಪರಿಚಯವಿರುವ ಡಾಕ್ಟರ್ ಗೆ ಕಿಡ್ನಿದಾನ ಮಾಡಲು ಡೆಪಾಸಿಟ್, ಎಲ್ ಐಸಿ ಪಾಲಿಸಿ ಮತ್ತು ವಿಮಾನದಲ್ಲಿ ಹೋಗಲು ಶುಲ್ಕ ಇತ್ಯಾದಿಗಳನ್ನು ಪಾವತಿಸಬೇಕು. ಕಿಡ್ನಿ ಮಾರಾಟ ಮಾರಾಟದಿಂದ ಬರುವ ಹಣಕ್ಕೆ ತೆರಿಗೆ ಪಾವತಿಸಬೇಕು’ ಎಂದು ಸುಳ್ಳಿನ ಕಂತೆ ಕಂತೆಗಳನ್ನು ಹೇಳ್ತಾ ಹೋದ ಅಭಿಜಿತ್ ಹಂತ ಹಂತವಾಗಿ 86 ಲಕ್ಷವನ್ನು ಪಡೆದುಕೊಂಡಿದ್ದಾನೆ. ಇನ್ನೂ ಕೂಡಾ ಹಣಕ್ಕೆ ಬೇಡಿಕೆ ಇಟ್ಟಾಗ ಕಿಡ್ನಿ ಮಾರಾಟ ಮಾಡಲು ಒಪ್ಪಿಕೊಂಡ ವ್ಯಕ್ತಿಗೆ ಸಂಶಯ ಬಂದಿದೆ. ಕೂಡಲೇ ಅವರು ತನ್ನ ಹಣ ಹಿಂತಿರುಗಿಸುವಂತೆ ಕೇಳಿದ್ದಾರೆ. ಯಾವಾಗ ದುಡ್ಡು ಕೇಳಿದ್ದಾನೆ ಎಂದು ಗೊತ್ತಾಯಿತೋ ಅಭಿಜಿತ್ ಸಂಪರ್ಕಕ್ಕೆ ಸಿಗದೇ ಹೋಗಿದ್ದಾನೆ.
ಈ ಬಗ್ಗೆ ಸಂತ್ರಸ್ತ ವ್ಯಕ್ತಿ ನೀಡಿದ ದೂರಿನನ್ವಯ ಉತ್ತರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.