7 ರಾಜ್ಯಗಳ ಅಳಿಯ, ಒಟ್ಟು 14 ಮಹಿಳೆಯರನ್ನು ಮದುವೆಯಾಗಿ ವಂಚಿಸಿದ್ದ ನಕಲಿ ವೈದ್ಯ ಕೊನೆಗೂ ಪೊಲೀಸ್ ಬಲೆಗೆ !! | ಸುಪ್ರೀಂಕೋರ್ಟ್ ವಕೀಲೆ, ಪೊಲೀಸ್ ಅಧಿಕಾರಿಗಳನ್ನೂ ಬಿಟ್ಟಿಲ್ಲ ಈ ಖತರ್ನಾಕ್ ವಂಚಕ
ಪ್ರಪಂಚದಲ್ಲಿ ಮೋಸ ಹೋಗುವವರು ಇರೋತನಕ ಮೋಸ ಮಾಡುವವರು ತಮ್ಮ ಕೆಲಸ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಇಲ್ಲೊಬ್ಬ ನಕಲಿ ವೈದ್ಯ ಏಳು ರಾಜ್ಯಗಳಲ್ಲಿ ಒಟ್ಟು 14 ಮಹಿಳೆಯರನ್ನು ಮದುವೆಯಾಗಿ ವಂಚಿಸಿದ್ದಾತ ಇದೀಗ ಒಡಿಶಾ ಪೊಲೀಸರ ಅತಿಥಿಯಾಗಿದ್ದಾನೆ.
ಬಿಧು ಪ್ರಕಾಶ್ ಸ್ವೈನ್(54) ಅಲಿಯಾಸ್ ರಮೇಶ್ ಸ್ವೈನ್ ಆರೋಪಿಯಾಗಿದ್ದಾನೆ.
ಈತ ಒಡಿಶಾದ ಕೇಂದ್ರಪ್ಪ ಜಿಲ್ಲೆಯ ನಿವಾಸಿಯಾಗಿದ್ದಾನೆ. ಮ್ಯಾಟ್ರಿಮೋನಿಯಲ್ ವೆಬ್ ಸೈಟ್ಗಳಲ್ಲಿ ತಾನು ವೈದ್ಯ ಎಂದು ಹೇಳಿಕೊಂಡು 14 ಮಹಿಳೆಯರನ್ನು ಮದುವೆಯಾಗಿದ್ದಾನೆ. ಸರಿ ಸುಮಾರು 7 ರಾಜ್ಯಗಳ ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಪಂಜಾಬ್, ದೆಹಲಿ, ಅಸ್ಸಾಂ, ಜಾರ್ಖಂಡ್, ಒಡಿಶಾದ ಮಧ್ಯವಯಸ್ಕ ಮಹಿಳೆಯರು ಮತ್ತು ವಿಚ್ಛೇದಿತರು ಸ್ವೈನ್ ಟಾರ್ಗೆಟಾಗಿದ್ದರು. ಕೆಲವು ವೈವಾಹಿಕ ವೆಬ್ಸೈಟ್ಗಳ ಮೂಲಕ ಮಹಿಳೆಯರನ್ನು ಸಂಪರ್ಕಿಸಿ ತಾನು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಕೆಲಸ ಮಾಡುವ ವೈದ್ಯ ಎಂದು ಸುಳ್ಳು ಹೇಳಿ ಬಲೆ ಬೀಸುತ್ತಿದ್ದನು. ಮದುವೆಯಾಗುವ ಮಹಿಳೆಯರ ಬಳಿ ಇರುವ ಹಣ ಪಡೆಯಲು ಸಂಚು ರೂಪಿಸಿ ವಿವಾಹವಾಗುತ್ತಿದ್ದನು. ಮದುವೆಯ ನಂತರ ಕೆಲವು ದಿನಗಳ ಕಾಲ ಅವರೊಂದಿಗೆ ಇರುತ್ತಿದ್ದ. ನಂತರ ಭುವನೇಶ್ವರಕ್ಕೆ ಯಾವುದೋ ಕೆಲಸದ ನಿಮಿತ್ತ ಹೋಗುವ ನೆಪದಲ್ಲಿ ಆ ಹೆಣ್ಣಮಕ್ಕಳನ್ನು ಅವರ ಪೋಷಕರ ಬಳಿ ಬಿಟ್ಟು ಹೋಗುತ್ತಿದ್ದ ಎಂದು ಭುವನೇಶ್ವರ ಡಿಸಿಪಿ ಹೇಳಿದ್ದಾರೆ.
ಸ್ವೇನ್ ವಿವಾಹವಾದ ಮಹಿಳೆಯರಲ್ಲಿ ಸುಪ್ರೀಂ ಕೋರ್ಟ್ ನ ವಕೀಲರು, ಹಿರಿಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಅಧಿಕಾರಿಯೂ ಸೇರಿದ್ದಾರೆ. 10 ಲಕ್ಷದ ಆಸೆಗಾಗಿ 2018ರಲ್ಲಿ ಪಂಜಾಬ್ನ ಐಪಿಎಸ್ ಅಧಿಕಾರಿಯನ್ನು ವಿವಾಹವಾದರು. ಬಳಿಕ ಗುರುದ್ವಾರಕ್ಕೆ ಆಸ್ಪತ್ರೆ ಮಂಜೂರು ಮಾಡುವುದಾಗಿ ಹೇಳಿ 11 ಲಕ್ಷ ರೂ.ಗಳನ್ನು ವಂಚಿಸಿದ್ದನು. ಸ್ವೇನ್ ಐದು ಮಕ್ಕಳ ತಂದೆಯಾಗಿದ್ದು, 1982 ರಲ್ಲಿ ಮೊದಲ ಬಾರಿಗೆ ವಿವಾಹವಾಗಿದ್ದಾನೆ. ನಂತರ 2002 ರಲ್ಲಿ ಮತ್ತೊಂದು ವಿವಾಹವಾದ. 2002 ರಿಂದ 2020ರ ನಡುವೆ ಅವರು ಹಲವಾರು ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ಅವರನ್ನು ಮದುವೆಯಾಗಿದ್ದಾನೆ ಎಂದು ಹೇಳಿದ್ದಾರೆ.
ಜುಲೈ 2021ರಲ್ಲಿ ದೆಹಲಿ ಮೂಲದ ಶಿಕ್ಷಕಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸ್ವೈನ್ ನನ್ನು ಬಂಧಿಸಲಾಗಿದೆ. ಸಂತ್ರಸ್ತೆ ತನ್ನ ದೂರಿನಲ್ಲಿ, ಸ್ವೈನ್ ತನ್ನನ್ನು ನವದೆಹಲಿಯ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ ಎಂದು ಹೇಳಿದ್ದಾರೆ.
ಮಹಿಳೆ ನೀಡಿದ ದೂರಿನಂತೆ ಭುವನೇಶ್ವರದ ಖಂಡಗಿರಿ ಪ್ರದೇಶದ ಬಾಡಿಗೆ ವಸತಿಯಿಂದ ಆತನನ್ನು ಬಂಧಿಸಲಾಗಿದೆ. ಸೆಕ್ಷನ್ 498 (ಎ), 419, 468, 471 ಮತ್ತು 494 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿವಿಧ ಮ್ಯಾಟ್ರಿಮೋನಿಯಲ್ ಸೈಟ್ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಇನ್ನೂ 13 ಮಹಿಳೆಯರನ್ನು ಆತ ವಂಚಿಸಿರುವುದು ತನಿಖೆಯ ವೇಳೆ ಬಹಿರಂಗಗೊಂಡಿದೆ.