ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೋ ಅಪ್ಲೋಡ್ ಮಾಡಿದ್ದಕ್ಕೆ ಮಾಡೆಲ್ ತಂಗಿಯನ್ನು ಉಸಿರುಗಟ್ಟಿಸಿ ಕೊಂದ ಅಣ್ಣ| 3 ವರ್ಷಗಳ ಬಳಿಕ ನ್ಯಾಯಾಲಯದಿಂದ ಬಿಡುಗಡೆ| ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಕಾನೂನು ವಿಫಲ
ಮಾಡೆಲ್ ಒಬ್ಬಳನ್ನು ಕೊಲೆ ಮಾಡಿದ ಪ್ರಕರಣದ ಆರೋಪಿಯನ್ನು ಅಂದರೆ ಆಕೆಯ ಸಹೋದರನನ್ನು ಮೂರು ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.
ಲಾಹೋರ್ ಹೈಕೋರ್ಟ್ ನ ಮುಲ್ತಾನ್ ಪೀಠವು ಮಾಡೆಲ್ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಖಂಡಿಲ್ ಬಲೂಚ್ ( 25) ಕೊಲೆ ಪ್ರಕರಣದಿಂದ ಆಕೆಯ ಸಹೋದರ ವಾಸಿಂ ಬಲೂಚ್ ನನ್ನು ಖುಲಾಸೆಗೊಳಿಸಿದೆ.
ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕೆ ಕಿರಿಯ ಸಹೋದರಿ ಖಂಡಿಲ್ ಬಲೂಚ್ ಳನ್ನು ಕೊಲೆ ಮಾಡಿದ್ದಾಗಿ 2016 ರಲ್ಲೇ ವಾಸಿಂ ಒಪ್ಪಿಕೊಂಡಿದ್ದ. ವೀಡಿಯೋ ಮೂಲಕ ತಾನು ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದ.
ಮಾಡೆಲ್ ಖಂಡಿಲ್ ಬಲೂಚ್ ಳ ನಿಜವಾದ ಹೆಸರು ಫೌಝಿಯಾ ಅಜೀಮ್. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಆಕೆ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಳು. ತನ್ನ ಗ್ಲಾಮರ್ ಫೋಟೋ ಹಾಗೂ ವೀಡಿಯೋಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಬಿಂದುವಾಗಿದ್ದಳು.
2016 ರಲ್ಲಿ ಖಂಡಿಲ್ ಳನ್ನು ಉಸಿರುಗಟ್ಟಿಸಿ ವಾಸಿಂ ಕೊಲೆ ಮಾಡಿದ್ದ. ಅಲ್ಲದೇ ಕೊಲೆ ಮಾಡಿದ್ದನ್ನು ಕೂಡಾ ಹೆಮ್ಮೆಯಿಂದ ಹೇಳಿಕೊಂಡಿದ್ದ ಕೂಡಾ. ಖಂಡಿಲ್ ಬಲೂಚ್ ಳನ್ನು ಕೊಂದ ಆರೋಪದ ಮೇಲೆ ತಪ್ಪೊಪ್ಪಿಕೊಂಡ ನಂತರವೂ ತಾನು ಎಸಗಿದ ಈ ಕೃತ್ಯಕ್ಕೆ ಶಿಕ್ಷೆ ನೀಡಬಾರದೆಂದು ಕೋರ್ಟ್ ಗೆ ವಿನಂತಿಸಿದ್ದ. ಆದರೆ 2019 ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು.
ಇದೀಗ ಈ ಕೊಲೆ ಅಪರಾಧಿಯನ್ನು ಪಾಕ್ ನ್ಯಾಯಾಲಯ ಬಿಡುಗಡೆ ಮಾಡಿದೆ. ಇದು ಅಲ್ಲಿನ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ.