ಒಂದು ಬೆಡ್ ನಲ್ಲಿ ರೋಗಿ ಮಲಗಿದ್ದರೆ, ಪಕ್ಕದ ಬೆಡ್ ನಲ್ಲಿ ಬೀದಿ ನಾಯಿಗಳು !! | ಇದು ಸರ್ಕಾರಿ ಆರೋಗ್ಯ ಕೇಂದ್ರದ ದುಸ್ಥಿತಿ
ಕೆಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಉಚಿತವಾಗಿ ಸಿಕ್ಕರೂ ಅಲ್ಲಿನ ನಿರ್ವಹಣೆ ಮಾತ್ರ ಉಸಿರುಗಟ್ಟಿಸುವಂತಿರುತ್ತದೆ. ಇಲ್ಲೊಂದು ಸರ್ಕಾರಿ ಆರೋಗ್ಯ ಕೇಂದ್ರದ ನಿರ್ವಹಣೆಯ ರೀತಿ ಸಂಪೂರ್ಣವಾಗಿ ಬಹಿರಂಗವಾಗಿದೆ. ಒಂದು ಬೆಡ್ ನಲ್ಲಿ ರೋಗಿ ಮಲಗಿದ್ದರೆ, ಪಕ್ಕದ ಬೆಡ್ ನಲ್ಲಿ ಬೀದಿ ನಾಯಿಗಳು ಮಲಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿವಾನ್ ಸದಾರ್ ಆಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ಇಂತಹ ಘಟನೆ ನಡೆದಿದೆ. ಇದು ಸರ್ಕಾರಿ ಆಸ್ಪತ್ರೆಯ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದ್ದು, ಹಲವರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಆಸ್ಪತ್ರೆಯ ಈ ಪರಿಸ್ಥಿತಿಯ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಸಿವಾನ್‍ನ ಸಿವಿಲ್ ಸರ್ಜನ್ ಡಾ. ವೈ ಕೆ ಶರ್ಮ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ಭದ್ರತಾ ಗಾರ್ಡ್‍ಗಳ ನಿರ್ಲಕ್ಷ್ಯತನವನ್ನು ಅಧಿಕಾರಿ ದೂಷಿಸಿದ್ದು, ಜನರಲ್ ವಾರ್ಡ್ ಗೆ ನಾಯಿಗಳು ನುಗ್ಗುವುದಕ್ಕೆ ಆಸ್ಪತ್ರೆಯಲ್ಲಿ ಮುರಿದು ಬಿದ್ದಿರುವ ಬಾಗಿಲು ಕಾರಣ. ಇದು ಹಳೆಯ ಕಟ್ಟಡವಾಗಿದ್ದು, ಹೊಸ ಕಟ್ಟಡವನ್ನು ನಿರ್ಮಿಸಬೇಕಿದೆ. ಆದರೆ ಬಾಗಿಲು ಮುರಿದಿದ್ದು, ನಾಯಿಗಳು ಪ್ರವೇಶಿಸುತ್ತಿದ್ದ ಪ್ರದೇಶವನ್ನು ಈಗ ಬಂದ್ ಮಾಡಲಾಗಿದೆ ಎಂದು ಡಾ. ವೈ.ಕೆ ಶರ್ಮ ತಿಳಿಸಿದ್ದಾರೆ.