ಬ್ರಾಹ್ಮಣರ ಹುಡುಗಿಯಂತೆ ಸಂಸ್ಕೃತದಲ್ಲಿ ಸಾಧನೆ ಮಾಡಿದ ಮುಸ್ಲಿಂ ಹುಡುಗಿ | ಕೊರಳ ತುಂಬಾ ಚಿನ್ನದ ಪದಕ ತೂಗು ಹಾಕಿಕೊಂಡ ಸಾಧಕಿ
ಲಖನೌ ವಿಶ್ವವಿದ್ಯಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಸಂಸ್ಕೃತ ಭಾಷೆಯಲ್ಲಿ ಐದು ಚಿನ್ನದ ಪದಕಗಳನ್ನು ಬಹುಮಾನವಾಗಿ ಪಡೆದು ದೇಶದ ಗಮನ ಸೆಳೆದಿದ್ದಾಳೆ. ಸಂಸ್ಕೃತ ಭಾಷಾ ಕಲಿಕೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವುದರ ಜತೆಗೆ ಸಂಸ್ಕ್ರತ ವಿಭಾಗದಲ್ಲಿಯೇ ಒಟ್ಟು 5 ಚಿನ್ನದ ಪದಕವನ್ನು ಗಳಿಸಿದ್ದಾಳೆ ಈ ಹುಡುಗಿ ಗಜಾಲಾ.
ಆಕೆ ತನ್ನ 10 ನೇ ತರಗತಿಯಲ್ಲಿದ್ದಾಗ ಆಕೆಯ ತಂದೆ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು. ಒಟ್ಟು ಐದು ಜನ ಮಕ್ಕಳು ಅವರು. ಇಬ್ಬರು ಸಹೋದರಿಯರು ಹಾಗೂ ಇಬ್ಬರು ಸಹೋದರರು. ಆ ಕುಟುಂಬದಲ್ಲಿ ಮನೆಯಲ್ಲಿ ಗಜಾಲಾ ಬಿಟ್ಟು ಇನ್ಯಾರೂ ದೊಡ್ಡ ಓದು ಓದಿಲ್ಲ. ಅಂತಹ ಕುಟುಂಬದಿಂದ ಬಂದ ಮುಸ್ಲಿಂ ಹುಡುಗಿ ಒಬ್ಬಳು ಈಗ ಸಂಸ್ಕೃತದಲ್ಲಿ ಬ್ರಾಹ್ಮಣರನ್ನು ಮೀರಿಸುವಂತೆ ಸಾಧನೆ ಮಾಡಿದ್ದಾಳೆ.
ಮುಂಜಾನೆ 5 ಗಂಟೆಗೆ ಎದ್ದು, ನಮಾಜ್ ಮಾಡಿ ಮನೆಕೆಲಸಗಳನ್ನು ಮಾಡಿದ ನಂತರ ದಿನಕ್ಕೆಏಳು ತಾಸು ಸಂಸ್ಕ್ರತಾಭ್ಯಾಸ. ಅಲ್ಲದೆ ಇಂಗ್ಲೀಷ್, ಹಿಂದಿ, ಉರ್ದು, ಅರೇಬಿಕ್ ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದಿರುವ ಗಜಾಲಾ, ಅದಕ್ಕಾಗಿ ತುಂಬ ಶ್ರಮ ಪಟ್ಟು ಓದಿದ್ದಾಳೆ.
ಆಕೆ ಮುಸ್ಲಿಂ ಯುವತಿಯಾದರೂ ಯೂನಿವರ್ಸಿಟಿಯ ಅದೆಷ್ಟೋ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗಜಾಲಾ ಅವರೇ ಸರಸ್ವತಿ ವಂದನೆ ಹಾಡುತ್ತಾರೆ. ಅಲ್ಲಿನ ಹಿಂದೂ ಸಂಘ ಸಂಸ್ಥೆಗಳು ಆಕೆಯನ್ನು ಬೆಂಬಲಿಸಿವೆ. ಮುಸ್ಲಿಂ ಎನ್ನುವ ಕಾರಣಕ್ಕೆ ಸಂಸ್ಕೃತ ಕಲಿತಿದ್ದಕ್ಕೆ ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅವೆಲ್ಲವನ್ನೂ ದಾಟಿ ಆಕೆ ಸಾಧನೆ ಮಾಡಿದ್ದಾಳೆ.
ಈಗ ಸಿಕ್ಕ ಎಲ್ಲಾ ಪ್ರಶಸ್ತಿ, ಪದಕಗಳ ಕ್ರೆಡಿಟ್ ನ್ನು ಗಜಾಲಾ ತಮ್ಮ ತಾಯಿ, ಸೋದರ- ಸೋದರಿಯರಿಗೆ ಅರ್ಪಿಸಿದ್ದಾರೆ. ಇವರೆಲ್ಲರ ಸಹಾಯವಿಲ್ಲದೇ ನಾನು ಈ ಮಟ್ಟಕ್ಕೆ ತಲುಪಲು ಸಾಧ್ಯವಿರುತ್ತಿರಲಿಲ್ಲ ಎಂದು ಗಜಾಲಾ ಹೇಳುತ್ತಾಳೆ. ಗಜಾಲಾ ಇಬ್ಬರು ಸಹೋದರರು ಮೆಕ್ಯಾನಿಕ್ ಕೆಲಸ ಮಾಡುತ್ತಾರೆ. ಗಜಲಾ ಪ್ರಕಾರ ಆಕೆಗೆ ಐದನೇ ಕ್ಲಾಸ್ ನಲ್ಲಿರುವಾಗಲೇ ಆಕೆಗೆ ಸಂಸ್ಕೃತ ಕಲಿಕೆಯಲ್ಲಿ ಆಸಕ್ತಿ ಮೂಡಿತ್ತಂತೆ.