ಒಂದು ವಾರದಲ್ಲಿ ನಾಲ್ಕು ಬಾರಿ ಹೃದಯಸ್ತಂಭನವಾದರೂ ವೆಂಟಿಲೇಟರ್ ಇಲ್ಲದೆಯೇ ಬದುಕಿದ ಮಹಿಳೆ !! | ಅಷ್ಟಕ್ಕೂ ಆ ಮಹಿಳೆ ಪ್ರಾಣಾಪಾಯದಿಂದ ಬಚಾವ್ ಆದದ್ದು ಹೇಗೆ ಗೊತ್ತಾ ??
ಆಯಸ್ಸು ಗಟ್ಟಿಯಾಗಿದ್ದರೆ ಸಾಕು ಎಂತಹ ಅಪಾಯ ಎದುರಾದರೂ ಬದುಕುಳಿಯುವುದುಂಟು. ಇದಕ್ಕೆ ನೈಜ ಸಾಕ್ಷಿ ಈ ಘಟನೆ. ಕ್ಷಯ ರೋಗದಿಂದ ಬಳಲುತ್ತಿದ್ದ 51 ವರ್ಷದ ಮಹಿಳೆಗೆ ಒಂದು ವಾರದಲ್ಲಿ ನಾಲ್ಕು ಬಾರಿ ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್) ಸಂಭವಿಸಿಯೂ ವೆಂಟಿಲೇಟರ್ ಇಲ್ಲದೆಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾಲ್ಕು ಬಾರಿ ಹೃದಯ ಸ್ತಂಭನಕ್ಕೊಳಗಾದ ಮಹಿಳೆಯನ್ನು ದೆಹಲಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಯಾವುದೇ ವೆಂಟಿಲೇಟರ್ ಬೆಂಬಲವಿಲ್ಲದೇ ಮಹಿಳೆ ಬದುಕುಳಿದಿದ್ದಾರೆ. ತೀವ್ರವಾದ ಉಸಿರಾಟದ ಸಮಸ್ಯೆ ಮತ್ತು ದೇಹದಲ್ಲಿ ಊತ ಕಂಡುಬಂದಾಗ ಅವರನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಯ ಹೃದಯದ ಸುತ್ತ ದ್ರವದ ಶೇಖರಣೆಯಾಗಿರುವುದು ಪ್ರಾಥಮಿಕ ಪರೀಕ್ಷೆಯಿಂದ ತಿಳಿದುಬಂದಿತ್ತು. ಹೀಗಾಗಿ ಹೃದಯದ ಬಡಿತದ ಮೇಲೆ ಪ್ರಭಾವ ಬೀರಿ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗಿತ್ತು.
ಹೆಚ್ಚುತ್ತಿದ್ದ ರಕ್ತದೊತ್ತಡ ನಿಯಂತ್ರಿಸಲು ಆಕೆಗೆ ಔಷಧ ಚಿಕಿತ್ಸೆಯನ್ನು ನೀಡಲಾಗಿತ್ತು. ರೋಗಿಯು ಟಿಬಿ ಕಾಯಿಲೆಯಿಂದಲೂ ಬಳಲುತ್ತಿದ್ದರು. ಕ್ಷಯ-ವಿರೋಧಿ ಚಿಕಿತ್ಸೆಯ ಸಮಯದಲ್ಲಿ, ರೋಗಿಯಲ್ಲಿ ನಿರಂತರ ವೇಗದ ಹೃದಯ ಬಡಿತ ಕಂಡುಬಂತು. ಇದು ನಮಗೆ ಸವಾಲೆನಿಸಿತು. ವಾರದೊಳಗೆ ಅವರು ನಾಲ್ಕು ಬಾರಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಆದರೂ ವೆಂಟಿಲೇಟರ್ ಬೆಂಬಲವಿಲ್ಲದೇ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ವೈದ್ಯಕೀಯವಾಗಿ ಇದು ತುಂಬಾ ಸವಾಲಿನ ಪ್ರಕರಣವಾಗಿತ್ತು. ವೈದ್ಯರ ತಂಡದ ಸೂಕ್ತ ತಪಾಸಣೆ, ಅಗತ್ಯ ಚಿಕಿತ್ಸೆ, ನಿಗಾವಹಿಸುವಿಕೆಯಿಂದಾಗಿ ರೋಗಿಯು ಅಪಾಯದಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಓಖ್ಲಾದ ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ನ ವಲಯ ನಿರ್ದೇಶಕರು ಹೇಳಿದ್ದಾರೆ.
ಇತ್ತೀಚೆಗೆ ಕನ್ನಡದ ನಟ ಪುನೀತ್ ರಾಜ್ಕುಮಾರ್ ಅವರು ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್)ದಿಂದಾಗಿ ಕೊನೆಯುಸಿರೆಳೆದಿದ್ದರು. ಒಮ್ಮೆ ಕಾರ್ಡಿಯಾಕ್ ಅರೆಸ್ಟ್ ಆದರೆ ಬದುಕುಳಿಯುವುದು ತುಂಬಾ ಕಷ್ಟ. ಆದರೆ ಈ ಮಹಿಳೆಗೆ ನಾಲ್ಕು ಬಾರಿ ಕಾರ್ಡಿಯಾಕ್ ಅರೆಸ್ಟ್ ಆದರೂ ಕೂಡ ಬದುಕುಳಿದಿರುವುದು ಅಚ್ಚರಿಯೇ ಸರಿ.