ಉಡುಪಿಯಲ್ಲಿ ಚಿಗುರೊಡೆದ ಹಿಜಾಬ್ ವಿವಾದಕ್ಕೆ ವಿದ್ಯಾರ್ಥಿನಿಯರಿಂದ ನವೆಂಬರ್ ನಲ್ಲೇ ನಡೆದಿತ್ತಾ ಸಂಚು?? | ವಿದ್ಯಾರ್ಥಿನಿಯರ ಹಿಂದಿದೆಯೇ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕೈ??
ರಾಜ್ಯದಲ್ಲಿ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರ ಬಗ್ಗೆ ಹಲವು ಆರೋಪ ಕೇಳಿ ಬಂದಿದೆ. ಹೌದು, ವಿದ್ಯಾರ್ಥಿನಿಯರು ಕಳೆದ ನವೆಂಬರ್ನಿಂದಲೇ ಹಿಜಾಬ್ ವಿವಾದ ಎಬ್ಬಿಸಲು ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ವಿದ್ಯಾರ್ಥಿನಿಯರು ಮಾಡಿದ್ದ ಸರಣಿ ಟ್ವೀಟ್ಗಳ ಸ್ಕ್ರೀನ್ ಶಾಟ್ ಬಿಡುಗಡೆ ಮಾಡಲಾಗಿದೆ.
ವಿಜಯ್ ಪಾಟೀಲ್ ಎಂಬುವವರು ಬಿಡುಗಡೆ ಮಾಡಿದ ಸರಣಿ ಟ್ವೀಟ್ಗಳ ಸಾಕ್ಷಿಯಾಗಿಸಿ, ವಿದ್ಯಾರ್ಥಿನಿಯರು ನವೆಂಬರ್ನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜೊತೆಗೆ ಸೇರಿಕೊಂಡು ಹಿಜಾಬ್ ವಿವಾದಕ್ಕೆ ವೇದಿಕೆ ನಿರ್ಮಾಣ ಮಾಡಿಕೊಂಡಿದ್ದರು ಎಂಬ ದಾಖಲೆ ಬಿಡುಗಡೆ ಮಾಡಿದ್ದಾರೆ.
ಬಾಬರಿ ಮಸೀದಿ ತೀರ್ಪು ವಿರುದ್ಧ, ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಹೀಗೆ ಮತೀಯ ಸೂಕ್ಷ್ಮ ವಿಚಾರಗಳನ್ನು ಇಟ್ಟುಕೊಂಡು ವಿದ್ಯಾರ್ಥಿನಿಯರು ಟ್ವೀಟ್ ಮಾಡಿದ್ದು ಇವರಿಗೆ ಟ್ವೀಟ್ಗೆ ಪ್ರತಿಯಾಗಿ ಸಿಎಫ್ಐ ರಾಷ್ಟಾಧ್ಯಕ್ಷರು ರೀ ಟ್ವೀಟ್ ಮಾಡಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಅಲ್ಲದೇ ನಾಲ್ವರು ಹಿಜಾಬ್ ವಿದ್ಯಾರ್ಥಿಗಳು ಏಕಕಾಲದಲ್ಲಿ ಟ್ವಿಟರ್ ಖಾತೆ ತೆರೆದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವನ್ನು ಪ್ರಮೋಟ್ ಮಾಡತೊಡಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ನವೆಂಬರ್ ತಿಂಗಳಲ್ಲಿ ಬಾಬರಿ ಮಸೀದಿ ತೀರ್ಪಿನ ವಿರುದ್ಧ ಟ್ವೀಟ್ ಮಾಡಿದ್ದಾರೆ. ಯುವತಿಯರ ಪ್ರತಿ ಟ್ವೀಟ್ ಅನ್ನು ಸಿಎಫ್ಐ ರಾಷ್ಟ್ರಾಧ್ಯಕ್ಷರು ರಿ ಟ್ವೀಟ್ ಮಾಡುತ್ತಿದ್ದರು. ವಿಜಯ್ ಪಟೇಲ್ ಎಂಬುವವರು ಇದೀಗ ಸಿಎಫ್ಐ ಸಂಘಟನೆಯ ಟ್ವಿಟರ್ ಟ್ರೆಂಡ್ ರಹಸ್ಯ ಬಯಲು ಮಾಡಿದ್ದಾರೆ.
ಈ ಯುವತಿಯರು ಹಿಜಾಬ್ ವಿವಾದ ಆರಂಭವಾಗುವ ಮೊದಲೇ ಸಿಎಎಫ್ಐ ಸಕ್ರಿಯ ಕಾರ್ಯಕರ್ತರಾಗಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದರು. ಹಿಜಾಬ್ ಹೋರಾಟಗಾರ್ತಿಯರಾದ ಅಲ್ಮಾಸ್, ಮುಸ್ಕಾನ್, ಅಲಿಯಾ ಅಸಾದಿ, ಮೊದಲಾದವರ ಟ್ವಿಟರ್ ಹಿಸ್ಟರಿಯಿಂದ ಸಾಕಷ್ಟು ಸಂಗತಿಗಳು ಬಹಿರಂಗವಾಗಿದ್ದು, ಮತೀಯವಾದಿ ವಿಚಾರಗಳನ್ನೇ ಟ್ವೀಟ್ ಮಾಡುತ್ತಿದ್ದರು.
ನವೆಂಬರ್ 21ರಂದು ಮಸೀದಿ, ಮೈಕುಗಳನ್ನು ಸಮರ್ಥಿಸಿ ಟ್ವೀಟ್ ಮಾಡಿದ್ದರು. ಡಿಸೆಂಬರ್ 12ಕ್ಕೆ ದೆಹಲಿ ದಂಗೆಯ ಆರೋಪಿ ರೌಫ್ ಶರೀಫ್ ಬಿಡುಗಡೆಗೆ ಆಗ್ರಹಿಸಿ ಯುವತಿಯರು ಟ್ವೀಟ್ ಮಾಡಿದ್ದರು. ಡಿಸೆಂಬರ್ 24ರ ಬಳಿಕ ಉಡುಪಿಯಲ್ಲಿ ಹಿಜಾಬ್ ಹೋರಾಟವನ್ನು ಯುವತಿಯರು ಆರಂಭಿಸಿದ್ದರು.
ಅಲ್ಲದೇ ಶಾಸಕ ರಘಪತಿ ಭಟ್ ಈ ಒಟ್ಟು ವಿವಾದದ ಬಗ್ಗೆ ಎನ್ಐಎ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ, “‘ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕೇರಳ, ಹೈದರಾಬಾದ್ನ ಟ್ರೈನರ್ಗಳು ತರಬೇತಿ ನೀಡುತ್ತಿದ್ದಾರೆ. ಹೀಗಾಗಿ ಇದರ ಬಗ್ಗೆ ಸಮಗ್ರವಾಗಿ ಎನ್ಐಎ ತನಿಖೆ ಆಗಬೇಕು. ವಿವಾದ ಆರಂಭವಾಗುವಾಗ ಹೈದಾರಾಬಾದ್ನಿಂದ ಓವೈಸಿ ಬೆಂಬಲಿಗ ಯುವಕರು ಬಂದಿದ್ದಾರೆ. ಅವರು ಬಂದಮೇಲೆ ಹಿಜಾಬ್ ಗಲಾಟೆ ಜೋರಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು” ಎಂದು ಶಾಸಕ ರಘಪತಿ ಭಟ್ ಹೇಳಿದ್ದಾರೆ.
ಇನ್ನೂ ವಿವಾದ ಆರಂಭಿಸಿದ ಉಡುಪಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರ ವಿಚಾರವಾಗಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ರುದ್ರೇಗೌಡ, “ವಿದ್ಯಾರ್ಥಿನಿಯರು ಕಳೆದೊಂದು ತಿಂಗಳಿಂದ ಅಶಿಸ್ತು ತೋರುತ್ತಿದ್ದಾರೆ. ಹಿಂದಿನಿಂದಲೂ ಕಾಲೇಜಿನಲ್ಲಿ ಹಿಜಾಬ್ ಧರಿಸುತ್ತಿದ್ದರು ಎನ್ನುವುದು ಸುಳ್ಳು. ಅವರ ಈಗಿನ ವಾಕ್ ಚಾತುರ್ಯ, ಸಂವಿಧಾನದ ಕಾನೂನು ಬಗೆಗಿನ ತಿಳುವಳಿಕೆ ನೋಡುವಾಗ ಖುಷಿ ಆಗುತ್ತದೆ. ಆದರೆ ಆ ಜ್ಞಾನ ಸದುಪಯೋಗ ಆದರೆ ಒಳ್ಳೆಯದು. ಕಾಲೇಜು ಆರಂಭವಾದಗಿನಿಂದ ಈ ತರಹದ ಅಹಿತಕರ ಘಟನೆ ಆಗಿಲ್ಲ. ಆದರೆ ಈ ವಿದ್ಯಾರ್ಥಿನಿಯರು ಅಶಾಂತಿ ಸೃಷ್ಟಿಸಿದ್ದಾರೆ. ಆದರೂ ವಿದ್ಯಾರ್ಥಿನಿಯರ ಬಗ್ಗೆ ಅನುಕಂಪ ಇದೆ. ವಿವಾದ ಮುಗಿದ ನಂತರ ಕಾಲೇಜಿಗೆ ಬಂದರೆ ಹಿಂದಿನಂತೆಯೇ ಪಾಠ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ಈ ಎಲ್ಲಾ ಘಟನೆಗಳನ್ನು ನೋಡಿದರೆ ವಿದ್ಯಾರ್ಥಿನಿಯರ ಹಿಂದೆ ಕಾಣದ ಕೈಯೊಂದು ಕೆಲಸ ಮಾಡುತ್ತಿರುವುದು ನಿಜವೆನಿಸುತ್ತಿದೆ. ಒಟ್ಟಿನಲ್ಲಿ ಹಿಜಾಬ್ ವಿವಾದ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದ್ದು ವಿವಾದ ಮುಂದುವರಿಯುತ್ತಲೇ ಇದೆ. ಈ ಎಲ್ಲಾ ವಿವಾದಗಳಿಗೆ ಸೋಮವಾರದ ಕೋರ್ಟ್ ತೀರ್ಪು ಮಂಗಳ ಹಾಡುತ್ತಾ ಎಂಬುವುದು ಮುಂದಿನ ಕುತೂಹಲವಾಗಿದೆ.