ಗೂಗಲ್ ಮ್ಯಾಪ್ ಆವಾಂತರ|ದಾರಿ ಗೊತ್ತಿಲ್ಲದೇ ಗೂಗಲ್ ಮ್ಯಾಪ್ ಬಳಸಿ ಮದುವೆಗೆ ಹೊರಟಿದ್ದ 7 ಮಂದಿಯಲ್ಲಿ 3 ಮಂದಿ ದಾರುಣ ಸಾವು|
ಇತ್ತೀಚೆಗೆ ಎಲ್ಲರೂ ತಮಗೆ ಗೊತ್ತಿಲ್ಲದ ಸ್ಥಳಕ್ಕೆ ಹೋಗಬೇಕಾದರೆ ಮೊದಲಿಗೆ ಹುಡುಕುವುದೇ ಗೂಗಲ್ ಮ್ಯಾಪ್. ಇತ್ತೀಚೆಗಂತೂ ಗೂಗಲ್ ಮ್ಯಾಪ್ ಬಳಕೆ ಹೆಚ್ಚೇ ಆಗುತ್ತಿದೆ. ಆದರೆ ಗೂಗಲ್ ಮ್ಯಾಪ್ ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಖಂಡಿತ. ಇದಕ್ಕೆ ಒಂದು ತಾಜಾ ನಿದರ್ಶನವೊಂದು ಕೇರಳದಲ್ಲಿ ನಡೆದಿದೆ.
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರೊಂದು ಹರಿಪ್ಪಡ್ ಕಡೆ ವೇಗವಾಗಿ ಹೋಗುತ್ತಿತ್ತು. ದಾರಿ ಗೊತ್ತಿಲ್ಲದ ಚಾಲಕ ಗೂಗಲ್ ಮ್ಯಾಪ್ ಬಳಸಿ ಕಾರು ಚಲಾಯಿಸುತ್ತಿದ್ದ. ಮ್ಯಾಪ್ ತೋರಿದ ದಾರಿಯನ್ನೇ ಈ ಚಾಲಕ ಅನುಸರಿಸಿ ಹೋಗುತ್ತಿದ್ದ. ಗೂಗಲ್ ಮ್ಯಾಪ್ ನಂತೆ ಅಡೂರ್ ಬೈಪಾಸ್ ನಲ್ಲಿ ಕಾರು ಚಾಲಕ ಎಡ ತಿರುವು ತೆಗೆದುಕೊಂಡಿದ್ದಾನೆ. ತಕ್ಷಣವೇ ತಪ್ಪು ದಾರಿಯಲ್ಲಿ ಹೋಗುತ್ತಿದ್ದೇವೆ ಎಂಬುದನ್ನು ಅರಿತ ಚಾಲಕ ಬ್ರೇಕ್ ಹಾಕುವ ಬದಲು ಆಕ್ಸಿಲೇಟರ್ ತುಳಿದಿದ್ದಾನೆ. ಬಳಿಕ ನಿಯಂತ್ರಣ ತಪ್ಪಿದ ಕಾರು ಪಕ್ಕದಲ್ಲೇ ಇದ್ದ ಕಾಲುವೆಗೆ ಉರುಳಿದೆ. ಮ್ಯಾಪ್ ತೋರಿದ ದಾರಿಯನ್ನೇ ಅನುಸರಿಸಿದ ಚಾಲಕ ನೇರವಾಗಿ ಕಾರನ್ನು ಕಾಲುವೆ ಒಳಗೆ ಇಳಿಸಿದ್ದಾನೆ.
ಏಳು ಮಂದಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಈ ಕಾರಲ್ಲಿ ಮೂರು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ದಾರಿ ಗೊತ್ತಿಲ್ಲದೇ ಚಾಲಕ ಗೂಗಲ್ ಮ್ಯಾಪ್ ಬಳಸಿದ್ದೇ ಈ ದುರ್ಘಟನೆಗೆ ಕಾರಣ. ಈ ದುರ್ಘಟನೆ ನಡೆಯುವ ಮುನ್ನ ಚಾಲಕ ಮೊಬೈಲ್ ನೋಡುತ್ತಿದ್ದುದಾಗಿ ಗಾಯಾಳುಗಳು ಹೇಳಿದ್ದಾರೆ.
ಮೃತಪಟ್ಟವರನ್ನು ಶ್ರೀಜಾ ( 45), ಶಾಕುಂತಲಾ ( 51) ಮತ್ತು ಇಂದಿರಾ ( 57) ಎಂದು ಗುರುತಿಸಲಾಗಿದೆ.
ಘಟನೆ ನಡೆದ ತಕ್ಷಣ ಬಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳಿಯರೊಡನೆ ಸೇರಿ ನಾಲ್ವರನ್ನು ರಕ್ಷಣೆ ಮಾಡಿದ್ದಾರೆ.