ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಹಿಜಾಬ್ ವಿವಾದ !! | ವಕೀಲ ಕಪಿಲ್ ಸಿಬಲ್ ಅವರ ಮನವಿಗೆ ಹೈಕೋರ್ಟ್ ತೀರ್ಪು ಬರುವವರೆಗೂ ಕಾದು ನೋಡೋಣ ಎಂದ ಸುಪ್ರೀಂಕೋರ್ಟ್
ಕರ್ನಾಟಕದಲ್ಲಿ ತಲೆದೋರಿರುವ ಹಿಜಾಬ್-ಕೇಸರಿ ಶಾಲು ವಿವಾದ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಿಜಾಬ್ ವಿವಾದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಮನವಿ ಸಲ್ಲಿಸಿರುವ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು. ಇನ್ನೆರಡು ತಿಂಗಳಲ್ಲಿ ಪರೀಕ್ಷೆ ಇದೆ. ಆದರೆ ವಿವಾದ ಕಾಡ್ಗಿಚ್ಚಿನಂತೆ ಎಲ್ಲ ಜಿಲ್ಲೆಗಳಿಗೆ ಹಬ್ಬುತ್ತಿದೆ. ಇದು ಒಂಭತ್ತು ನ್ಯಾಯದೀಶರ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆಯಾಗಬೇಕು ಎಂದು ಕೇಳಿಕೊಂಡಿದ್ದಾರೆ.
ಕೋರ್ಟ್ ಈ ವಿಚಾರವನ್ನು ಮೊದಲು ವಿಚಾರಣೆ ಅರ್ಜಿಗಳ ಪಟ್ಟಿಯಲ್ಲಿ ಸೇರಿಸಿ. ಯಾವುದೇ ಮಧ್ಯಂತರ ಆದೇಶ ನೀಡುವುದು ನಿಮಗೆ ಬಿಟ್ಟಿದ್ದು. ಶಾಲೆ ಕಾಲೇಜು ಬಂದ್ ಆಗಿವೆ, ವಿದ್ಯಾರ್ಥಿನಿಯರ ಮೇಲೆ ಕಲ್ಲು ಎಸೆಯಲಾಗುತ್ತಿದೆ. ಇದು ಇಡೀ ದೇಶಕ್ಕೆ ವ್ಯಾಪಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಿಬಲ್ ಅವರ ಮನವಿ ಕುರಿತು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್ ಈ ಅರ್ಜಿ ವಿಚಾರಣೆ ನಡೆಸುತ್ತಿದೆ. ನಾವು ಪಟ್ಟಿ ಮಾಡಿದರೆ ಹೈಕೋರ್ಟ್ ವಿಚಾರಣೆ ನಡೆಸುವುದಿಲ್ಲ. ನಾವು ಇದನ್ನು ಮುಂದೆ ನೋಡುತ್ತೇವೆ. ಮೊದಲು ಹೈಕೋರ್ಟ್ ವಿಚಾರಣೆ ಮುಗಿಸಲಿ ಸ್ಪಷ್ಟಪಡಿಸಿದೆ.