ಕಾರವಾರ : ‘ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತ, ಪರಿಸರ ತಜ್ಞ ಮಹಾದೇವ ವೇಳಿಪ ನಿಧನ
ಜಾನಪದ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ತಜ್ಞ ಜೊಯಿಡಾ ತಾಲ್ಲೂಕಿನ ಕಾರ್ಟೊಳಿ ಗ್ರಾಮದ ಮಹಾದೇವ ಬುದೋ ವೇಳಿಪ ( 92) ಗುರುವಾರ ಬೆಳಿಗ್ಗೆ ನಿಧನರಾದರು.
ಹಲವು ವರ್ಷಗಳಿಂದ ಬುಡಕಟ್ಟು ಸಂಸ್ಕೃತಿ ಹಾಗೂ ಕಲೆಯನ್ನು ಬೆಳೆಸಿ ಉಳಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಬುಡಕಟ್ಟು ಕುಣಬಿ ಸಂಸ್ಕ್ರತಿಯ ಬಗ್ಗೆ ಹಾಡುಗಳ ಮೂಲಕ ಅರಿವು ಮೂಡಿಸುತ್ತಿದ್ದರು. ಹಕ್ಕಿಗಳ ಕೂಗನ್ನು ಆಧರಿಸಿ ನಿಖರವಾದ ಸಮಯ ಹೇಳುವುದು ಅವರಿಗೆ ಕರಗತವಾಗಿತ್ತು.
ನಾಗೋಡಾ ಅವರು ಪಂಚಾಯತಿ ವ್ಯಾಪ್ತಿಯ ಕಾರ್ಟೋಳಿಯವರು. 2021 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಲಭಿಸಿದೆ. ಪರಿಸರದ ಬಗ್ಗೆ ಅಪಾರವಾದ ಜ್ಞಾನ ಸಂಪತ್ತನ್ನು ಹೊಂದಿದವರು.
ಅವರಿಗೆ ಮೂವರು ಗಂಡುಮಕ್ಕಳು ಹಾಗೂ ನಾಲ್ವರು ಹೆಣ್ಣು ಮಕ್ಕಳು. ಪತ್ನಿ ಮತ್ತು ಹಿರಿಯ ಮಗ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಗೆ ಜೋಯಿಡಾ ತಾಲೂಕಿನಿಂದ ಪಾತ್ರರಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಭಾಜನರಾಗಿದ್ದರು.