ಬುರ್ಖಾ ಧರಿಸಿದ್ದ ಮುಸ್ಲಿಂ ಮಹಿಳೆಯ ಬೆನ್ನಮೇಲೆ ಸಮಾಜವಾದಿ ಪಕ್ಷದ ಸ್ಟಿಕ್ಕರ್ ಅಂಟಿಸಿದ ಯುವಕ !! | ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಫುಲ್ ವೈರಲ್
ಉತ್ತರಪ್ರದೇಶದಲ್ಲಿ ಚುನಾವಣಾ ಕಣ ರಂಗೇರಿದೆ. ಪ್ರಚಾರದ ಸಮಯದಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯ ಬೆನ್ನ ಮೇಲೆ ಯುವಕನೊಬ್ಬ ಸಮಾಜವಾದಿ ಪಕ್ಷದ ಸ್ಟಿಕ್ಕರ್ ಅಂಟಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಭಾರತವನ್ನು ಆವರಿಸುತ್ತಿದೆ. ಈ ಪರಿಣಾಮ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ 2022ರ ಮೊದಲ ಹಂತದ ಮತದಾನ ಪ್ರಾರಂಭವಾಗುವುದಕ್ಕೂ ಮುನ್ನ ಪ್ರಚಾರ ಕಾರ್ಯ ನಡೆಯುತ್ತಿತ್ತು. ಈ ವೇಳೆ ಸಮಾಜವಾದಿ ಪಕ್ಷದ ಕಾರ್ಯಕರ್ತ, ಬುರ್ಖಾ ಧರಿಸಿದ ಮಹಿಳೆಯ ಬೆನ್ನಿನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ್ದಾನೆ.
ಈ ವೀಡಿಯೋವನ್ನು ನಿನ್ನೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಈ ವೀಡಿಯೋದಲ್ಲಿ ಒಬ್ಬ ಎಸ್‍ಪಿ ಕಾರ್ಯಕರ್ತ ತನ್ನ ಪಕ್ಷದ ಪೋಸ್ಟರ್ ಅನ್ನು ಮುಸ್ಲಿಂ ಮಹಿಳೆ ಬೆನ್ನ ಮೇಲೆ ಅಂಟಿಸುತ್ತಿರುವುದು ಕಂಡುಬಂದಿದೆ. ಇದಾದ ನಂತರ ಆತ ಮಹಿಳೆಯನ್ನು ಎಳೆದಾಡಿದ್ದಾನೆ. ಈ ಘಟನೆ ಲಕ್ನೋದಲ್ಲಿ ನಡೆದಿದೆ. ಇದು ಕೆಂಪು ಟೋಪಿಯ ಕಪ್ಪು ಶೋಷಣೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಂದಿಗೆ ಎಸ್‍ಪಿ ನಾಯಕನ ಅನುಚಿತ ವರ್ತನೆಯನ್ನು ನೋಡಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ವೀಡಿಯೋವನ್ನು ಅನುರಾಗ್ ಅವರು ಮೊದಲ ಹಂತದ ಮತದಾನಕ್ಕೂ ಮುನ್ನ ಹಂಚಿಕೊಂಡಿದ್ದು, ಪಕ್ಷಕ್ಕೆ ನಿಮ್ಮ ಮತ ಹಾಕಬೇಡಿ ಎಂದು ಪರೋಕ್ಷವಾಗಿ ಜನರಿಗೆ ಕರೆ ಕೊಟ್ಟಿದ್ದಾರೆ. ವೀಡಿಯೋ ವೈರಲ್ ಆಗುತ್ತಿದಂತೆ ಮುಸ್ಲಿಂ ಮಹಿಳೆ ಮತ್ತು ಪೋಸ್ಟರ್ ಅಂಟಿಸಿದ ಯುವಕ ಈ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಯುವಕ ಮೊಹಮ್ಮದ್ ಜೈನುದ್ ಈ ಕುರಿತು ಮಾಹಿತಿ ನೀಡಿದ್ದು, ನಾವು ಅಕ್ಕ-ತಮ್ಮ. ನಾವಿಬ್ಬರು ಸಮಾಜವಾದಿ ಪಕ್ಷದ ಪ್ರಚಾರ ಮಾಡುತ್ತಿದ್ದ ವೇಳೆ ವೀಡಿಯೋ ಮಾಡಲಾಗಿದೆ ಎಂದು ಹೇಳಿದ್ದಾರೆ. ಬುರ್ಖಾಧಾರಿ ಶಬ್ಬೋ ಈ ಕುರಿತು ಪ್ರತಿಕ್ರಿಯಿಸಿದ್ದು, ಜೈನುದ್ ನನ್ನ ಕಿರಿಯ ಸಹೋದರ. ನಾವು ಒಟ್ಟಾಗಿ ಸಮಾಜವಾದಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದೆವು. ಪರಸ್ಪರ ತಮಾಷೆ ಮಾಡುತ್ತಿದ್ದೆವು. ಈ ಸಮಯದಲ್ಲಿ ನನಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಬಿಜೆಪಿ ಪಕ್ಷದವರು ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.