ಹೋಟೆಲ್ ನಲ್ಲಿ ತಿಂಡಿಗಾಗಿ ಸ್ನೇಹಿತನ ಜೊತೆ ಕಾಯುತ್ತಿದ್ದ 25 ವರ್ಷದ ಕಾನೂನು ವಿದ್ಯಾರ್ಥಿ | ಕುರ್ಚಿಯಿಂದ ಬಿದ್ದ ಯುವಕ ಹಠಾತ್ ಸಾವು|

ಹೃದಯಾಘಾತ ಈಗ ಯಾವಾಗ ಯಾರಿಗೆ ಎಲ್ಲೆಂದರಲ್ಲಿ ಬರುವುದು ಸಾಮಾನ್ಯವಾಗಿದೆ. ಈಗ ಇಂಥದ್ದೇ ಒಂದು ಘಟನೆ ಮೈಸೂರಿನ ಹುಣಸೂರು ಪಟ್ಟಣದ ಹೋಟೆಲ್ ನಲ್ಲಿ ನಡೆದಿದೆ.

 

ಹುಣಸೂರು ತಾಲೂಕಿನ ನಂಜಾಪುರ ಗ್ರಾಮದ ನಿತಿನ್ ಕುಮಾರ್ (25) ಮೃತ ಕಾನೂನು ವಿದ್ಯಾರ್ಥಿ. ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಿತಿನ್ ಟಿಫನ್ ತಿನ್ನಲೆಂದು ಹುಣಸೂರಿನ ಟಿಫಾನಿಸ್ ಹೋಟೆಲ್ ಗೆ ಗೆಳೆಯನ ಜೊತೆ ಹೋಗಿದ್ದ. ತಿಂಡಿಗೆ ಆರ್ಡರ್ ಮಾಡಿ ಇಬ್ಬರೂ ಊಟದ ಟೇಬಲ್ ನಲ್ಲಿ ಕೂತಿದ್ದರು. ಅಕ್ಕಪಕ್ಕ ಗ್ರಾಹಕರೆಲ್ಲ ತಿಂಡಿ ತಿನ್ನುತ್ತಾ ಬಿಜಿಯಾಗಿದ್ದರೆ, ಈ ಇಬ್ಬರು ಗೆಳೆಯರು ಮಾತನಾಡುತ್ತಾ ತಿಂಡಿಗಾಗಿ ಕಾಯುತ್ತಾ ಕುಳಿತುಕೊಂಡಿದ್ದರು.

ಅಷ್ಟರಲ್ಲಿ ನಿತಿನ್ ಕುರ್ಚಿಯಿಂದ ಕುಸಿದು ಬೀಳುತ್ತಾನೆ. ಗಾಬರಿಗೊಂಡ ಸ್ನೇಹಿತ ನಿತಿನ್ ನನ್ನು ಮೇಲಕ್ಕೆ ಎತ್ತಿ ಉಪಚರಿಸುತ್ತಾನೆ‌. ಈ ವೇಳೆ ಅಕ್ಕಪಕ್ಕದಲ್ಲಿದ್ದ ಗ್ರಾಹಕರೂ ನೆರವಿಗೆ ಬಂದರಾದರೂ ಅಷ್ಟರಲ್ಲಿ ಹೃದಯಾಘಾತದಿಂದ ನಿತಿನ್ ನಿಧನ ಹೊಂದಿದ್ದಾನೆ. ಈ ದೃಶ್ಯ ಹೋಟೆಲ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Leave A Reply

Your email address will not be published.