ಹಿಜಾಬ್,ಕೇಸರಿ ಶಾಲು, ಹಸಿರು ಶಾಲು ಧರಿಸಿ ಬಂದವರಿಗೆ ಪಾಠ ಮಾಡಲ್ಲ| ಮಸೀದಿ ಒಳಗೆ ಪ್ರವೇಶವಿಲ್ಲದ ವಿರುದ್ಧ ನಿಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿ, ಶಿಕ್ಷಣ ವ್ಯವಸ್ಥೆ ಒಳಗಡೆ ಈ ಹೋರಾಟ ಬೇಡ -ಬಿ. ಸಿ ನಾಗೇಶ್

ಮೈಸೂರು: ಮಕ್ಕಳನ್ನು ರಸ್ತೆಯಲ್ಲಿ ನಿಲ್ಲಿಸಲು ಇದು ಪಾಕಿಸ್ತಾನ ಅಲ್ಲ. ಆದ್ರೆ ಹಿಜಾಬ್ ಧರಿಸಿ ಬಂದವರಿಗೆ ಪಾಠ ಮಾಡಲ್ಲ. ಕೇಸರಿ ಶಾಲು, ಹಸಿರು ಶಾಲು ಧರಿಸಿ ಬಂದವರಿಗೂ ತರಗತಿ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,ಕುಂದಾಪುರದಲ್ಲಿ ಇಂದು ಹಿಜಾಬ್ ಧರಿಸಿ ಬಂದವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದ್ದು, ಈ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.ಆ ಕೊಠಡಿಯಲ್ಲಿ ಯಾವ ಕ್ಲಾಸ್‌ಗಳೂ ನಡೆಯುತ್ತಿಲ್ಲ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ರಸ್ತೆಯಲ್ಲಿ ನಿಲ್ಲುವುದು ಬೇಡವೆಂದು ಕೊಠಡಿಯಲ್ಲಿ ಕೂರಿಸಿದ್ದೇವೆ. ವಿದ್ಯಾರ್ಥಿನಿಯರನ್ನ ರಸ್ತೆಯಲ್ಲಿ ನಿಲ್ಲಿಸಲು ಇದು ಪಾಕಿಸ್ತಾನ ಅಲ್ಲ. ಅವರು ನಮ್ಮ ಮಕ್ಕಳು. ತುಂಬಾ ಮುಗ್ಧತೆ ಇರುವ ಹೆಣ್ಣುಮಕ್ಕಳು. ಅವರ ಮುಗ್ಧತೆಯನ್ನ ಕೆಲ ರಾಜಕಾರಣಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮುಗ್ಧ ವಿದ್ಯಾರ್ಥಿನಿಯರಿಗೆ ಕೊಠಡಿಯಲ್ಲಿ ಕೂರಿಸಿ ಬುದ್ಧಿ ಹೇಳುತ್ತೇವೆ. ಇದು ಧರ್ಮದ ಶಿಕ್ಷಣವಲ್ಲ. ಇದನ್ನ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಅರ್ಥ ಮಾಡಿಕೊಳ್ಳಬೇಕು ಎಂದರು.

ನ್ಯಾಯಾಲಯದ ಆದೇಶವನ್ನು ನಿರೀಕ್ಷಿಸುತ್ತಿದ್ದೇವೆ. ಅದರ ಆಧಾರದ ಮೇಲೆ ಶಿಕ್ಷಣ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ. ನಿಮಗೆ ಪಾಠ ಬೇಕಾದರೆ ಸಮವಸ್ತ್ರ ಧರಿಸಿಯೇ ಶಾಲಾ-ಕಾಲೇಜಿಗೆ ಬರಬೇಕು. ಶಾಲಾ ಆವರಣದ ಗೇಟ್​ವರೆಗೂ ಹಿಜಾಬ್ ಧರಿಸಿ ಬನ್ನಿ, ನಮ್ಮ ತಕಾರಾರಿಲ್ಲ.

ಮುಂದುವರೆದು ಮಾತಾಡಿದವರು,ನಿಮ್ಮ ಮಸೀದಿ ಒಳಗೆ ನಿಮಗೆ ಪ್ರವೇಶವಿಲ್ಲ. ಇದರ ವಿರುದ್ಧ ಹೋರಾಟ ಮಾಡಿ. ನಿಮ್ಮ ಹಕ್ಕುಗಳಿಗಾಗಿ ಅಲ್ಲಿ ಧ್ವನಿ ಎತ್ತಿ. ಶಿಕ್ಷಣ ವ್ಯವಸ್ಥೆ ಒಳಗಡೆ ಈ ಹೋರಾಟ ಮಾಡಬೇಡಿ. ಕೊಲಾರದಲ್ಲಿ ನಮಾಜ್ ಕೂಡ ಮಾಡಿದ್ದಾರೆ. ಇಂತಹದ್ದಕ್ಕೆಲ್ಲಾ ಅವಕಾಶ ಇಲ್ಲ ಎಂದು ಬಿ.ಸಿ. ನಾಗೇಶ್ ಹೇಳಿದರು.

Leave A Reply

Your email address will not be published.