ದಶಕಗಳ ನಂತರ ಧರ್ಮಸ್ಥಳದಲ್ಲಿ ಇಬ್ಬರು ರಾಜ್ಯ ರಾಜಕಾರಣಿಗಳ ಆಣೆ-ಪ್ರಮಾಣ !!
ದಶಕಗಳ ನಂತರ ರಾಜ್ಯ ರಾಜಕೀಯದಲ್ಲಿ ಆಣೆ-ಪ್ರಮಾಣದ ವಿಷಯ ಸುಳಿದಾಡಿದ್ದು, ಸಾಗರದ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ಮತ್ತು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಬೇಲೂರು ಗೋಪಾಲಕೃಷ್ಣ ಅವರು ಫೆಬ್ರವರಿ 12 ರಂದು ರಂದು ಧರ್ಮಸ್ಥಳದಲ್ಲಿ ದೇವರ ಮುಂದೆ ಆಣೆ- ಪ್ರಮಾಣ ಮಾಡುವ ಸಾಧ್ಯತೆಯಿದೆ.
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ 2011ರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಎಚ್ ಡಿ ಕುಮಾರಸ್ವಾಮಿ ಧರ್ಮಸ್ಥಳದ ದೇವಾಲಯ ಮುಂಭಾಗ ಆಣೆ -ಪ್ರಮಾಣ ಮಾಡುವುದಾಗಿ ಹೇಳಿದ್ದರು. ಆದರೆ, ಯಡಿಯೂರಪ್ಪ ಅವರಿಗೆ ಬೇಡ ಎಂದು ಹೈಕಮಾಂಡ್ ಹೇಳಿದ್ದರಿಂದ ಅದು ನಡೆಯಲಿಲ್ಲ. ಈ ಬಾರಿ ಮಾಡಿ ಶಾಸಕರು ಆಣೆ-ಪ್ರಮಾಣದ ಮಾತುಗಳನ್ನಾಡಿದ್ದಾರೆ.
ಹೊಸನಗರದಲ್ಲಿ ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋಪಾಲಕೃಷ್ಣ, ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಮರಳು ಲಾರಿ ಮಾಲೀಕರಿಂದ ಹಾಲಪ್ಪ ಕಮೀಷನ್ ಪಡೆಯುತ್ತಿದ್ದಾರೆ . ಒಂದು ವೇಳೆ ಕಮಿಷನ್ ನೀಡದಿದ್ದರೆ ಅಕ್ರಮವಾಗಿ ಮರಳು ಹೊರತೆಗೆಯಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.
ಒಂದು ವೇಳೆ ಹಾಲಪ್ಪ ಪ್ರಾಮಾಣಿಕರಾಗಿದ್ದು, ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದರೆ ದೇವರ ಮುಂದೆ ಬಂದು ಪ್ರಮಾಣ ಮಾಡಲಿ. ನನ್ನ ವಿರುದ್ಧ ಹೇಳಿಕೆ ನೀಡುವಂತೆ ಲಾರಿ ಮಾಲೀಕರಿಗೆ ಹಾಲಪ್ಪ ಎತ್ತುಕಟ್ಟುತ್ತಿದ್ದಾರೆ. ಅದರ ಬದಲು ಹಾಲಪ್ಪ ಸ್ವಯಂ ಪ್ರೇರಿತರಾಗಿ ದೇವರ ಮುಂದೆ ಬರಲಿ, ಹಾಲಪ್ಪ ಕಮೀಷನ್ ಪಡೆದಿರುವುದಾಗಿ ನಾನು ಕೂಡಾ ಪ್ರಮಾಣ ಮಾಡುತ್ತೇನೆ ಎಂದು ಗೋಪಾಲಕೃಷ್ಣ ಹೇಳಿದರು.
ಗೋಪಾಲಕೃಷ್ಣ ಹೇಳಿಕೆಗೆ ಬುಧವಾರ ತಿರುಗೇಟು ನೀಡಿದ ಹಾಲಪ್ಪ, ದಿನಾಂಕ ನಿಗದಿಪಡಿಸಲಿ, ಮರಳು ಲಾರಿ ಮಾಲೀಕರಿಂದ ನಾನಾಗಲಿ ಅಥವಾ ನನ್ನ ಸಂಬಂಧಿಕರಾಗಲಿ ಕಮಿಷನ್ ಪಡೆದಿದ್ದರೆ ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧವಿರುವುದಾಗಿ ತಿಳಿಸಿದರು. ಪೊಲೀಸರಿಂದಲೂ ನಾನು ಯಾವುದೇ ಹಣ ಪಡೆದಿಲ್ಲ. ಫೆಬ್ರವರಿ 13 ರೊಳಗೆ ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧವಿರುವುದಾಗಿ ಹಾಲಪ್ಪ ಹೇಳಿದರು.
ಆದಾಗ್ಯೂ, ಫೆಬ್ರವರಿ 13 ರಂದು ಕುಟುಂಬದ ಕಾರ್ಯಕ್ರಮವೊಂದು ಇರುವುದರಿಂದ ಫೆಬ್ರವರಿ 12 ರಂದು ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧವಿರುವುದಾಗಿ ಹಾಲಪ್ಪ ಶುಕ್ರವಾರ ಹೇಳಿದ್ದಾರೆ. ಫೆಬ್ರವರಿ 13 ರಂದು ದೇವರ ಮುಂದೆ ಪ್ರಮಾಣ ಮಾಡಲು ತಾವು ಕೂಡಾ ಸಿದ್ಧವಿರುವುದಾಗಿ ಗೋಪಾಲಕೃಷ್ಣ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಶಾಸಕರು ಈಗ ದಿನಾಂಕವನ್ನು ಬದಲಾಯಿಸಿದ್ದಾರೆ ಎಂದು ನನಗೆ ತಿಳಿಸಲಾಯಿತು. ಶೀಘ್ರದಲ್ಲೇ ನನ್ನ ಹೇಳಿಕೆಯನ್ನು ನೀಡುತ್ತೇನೆ ಎಂದು ಅವರು ಹೇಳಿದರು.