ಫೇಸ್ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ !!!ಬರೋಬ್ಬರಿ 16 ಲಕ್ಷ ಕೋಟಿ ನಷ್ಟ ಕಂಡ ಮೆಟಾ ನೆಟ್ ವರ್ಕ್!
ನ್ಯೂಯಾರ್ಕ್ : ಸಾಮಾಜಿಕ ಮಾಧ್ಯಮದ ದೈತ್ಯ ಸಂಸ್ಥೆ ಫೇಸ್ ಬುಕ್ ಗೆ ಭಾರೀ ಹೊಡೆತ ಬಿದ್ದಿದೆ. ಇದೇ ಮೊದಲ ಬಾರಿಗೆ ಫೇಸ್ ಬುಕ್ ಬರೋಬ್ಬರಿ ಎರಡು ದಶಕಗಳಲ್ಲಿ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಇದರಿಂದಾಗಿ ಆದಾಯ ಭಾರೀ ಪ್ರಮಾಣದಲ್ಲಿ ಕುಸಿದಿದೆ.
ಹಿಂದಿನ ತ್ರೈಮಾಸಿಕದಲ್ಲಿ ಫೇಸ್ ಬುಕ್ ಗೆ 193 ಕೋಟಿ ಬಳಕೆದಾರರಿದ್ದರು. 2021 ರ ಡಿಸೆಂಬರ್ ನ ಮೂರನೇ ತ್ರೈಮಾಸಿಕಕ್ಕೆ ಫೇಸ್ ಬುಕ್ ಬಳಕೆದಾರರ ಸಂಖ್ಯೆಯು 192.3 ಕೋಟಿಗೆ ಕುಸಿತ ಕಂಡಿದೆ ಎಂದು ಮೆಟಾ ನೆಟ್ ವರ್ಕ್ ಮಾಹಿತಿ ನೀಡಿದೆ. ಇದರ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ. ಫೇಸ್ಬುಕ್ ಷೇರುಗಳ ಮೌಲ್ಯ ಶೇ.26 ರಷ್ಟು ಕುಸಿತ ಕಂಡಿದೆ. ಇದರಿಂದ ಕಂಪನಿಗೆ 16 ಲಕ್ಷ ಕೋಟಿ ರೂ. ನಷ್ಟವಾಗಿದೆ. ಬಳಕೆದಾರರ ಗಣನೀಯ ಇಳಿಕೆಯಿಂದಾಗಿ ಜಾಹೀರಾತುಗಳ ಸಂಖ್ಯೆಯು ಇಳಿಮುಖವಾಗಲಿದೆ ಎಂದು ಹೇಳಲಾಗಿದೆ.
ಟಿಕ್ ಟಾಕ್, ಯೂಟ್ಯೂಬ್ ಹಾಗೂ ಇತರ ಜಾಲತಾಣಗಳೊಂದಿಗೆ ಸ್ಪರ್ಧೆ ಹೆಚ್ಚಾಗಿದ್ದೇ ಈ ಕುಸಿತಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಮೆಟಾ ಜಾಗತಿಕವಾಗಿ ಸುಮಾರು ಒಂದು ಮಿಲಿಯನ್ ದೈನಂದಿನ ಬಳಕೆದಾರರನ್ನು ಕಳೆದುಕೊಳ್ಳುತ್ತಿದೆ. ಭಾರತದ ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿಯವರಿಗಿಂತ ಹಿಂದೆ ಉಳಿದಿದ್ದಾರೆ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್.