ಗ್ಲಾಮರ್ ಲೋಕ ಬಿಟ್ಟು ರಾಜಕೀಯ ಪ್ರವೇಶ ಪಡೆದ ಮಾಡೆಲ್ !!!
ರಾಜಕೀಯಕ್ಕೆ ಗ್ಲಾಮರ್ ಲೋಕದಿಂದ ಬಂದು ಮಿಂಚಿದವರು ತುಂಬಾನೇ ಮಂದಿ ಇದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಪ್ರದೇಶದ ಹಸ್ತಿನಾಪುರದಿಂದ ‘ ಮಿಸ್ ಬಿಕನಿ ಇಂಡಿಯಾ’ ಆಗಿದ್ದ, ಅರ್ಚನಾ ಗೌತಮ್ ಅವರಿಗೆ ಟಿಕೆಟ್ ನೀಡಿತ್ತು. ಈಗ ಇದೇ ಬಣ್ಣದ ಲೋಕದ ಆಸೆಯನ್ನು ಬಿಟ್ಟು ಜನಸೇವೆಗೆ ಮುಂದಾಗಿದ್ದಾರೆ ಒಡಿಶಾದ ಗ್ಲಾಮರ್ ಬೊಂಬೆ ಪ್ರಿಯಾಂಕಾ ನಂದ. ಗ್ರಾಮಪಂಚಾಯತಿ ಚುನಾವಣೆಗೆ ಎಂಟ್ರಿ ಕೊಟ್ಟು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಅನೇಕ ಬ್ಯೂಟಿ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಟೈಟಲ್ ಗಳನ್ನು ಬಾಚಿಕೊಂಡಿರುವ ಈ ಸುಂದರಿ ಈಗ ರಾಜಕೀಯದಲ್ಲಿ ಸಕ್ರಿಯರಾಗುವತ್ತ ಗಮನ ಹರಿಸಿದ್ದಾರೆ. ಸದ್ಯಕ್ಕೆ ಬಲಂಗೀರ್ ಜಿಲ್ಲೆಯ ಗ್ರಾಮವೊಂದರಲ್ಲಿ ಮತಯಾಚನೆ ಮಾಡುತ್ತಿದ್ದಾರೆ.
ಅಂದಹಾಗೆ ಪ್ರಿಯಾಂಕಾ, ಬಲಂಗೀರ್ ಜಿಲ್ಲೆಯ ಧುಲುಸರ್ ಗ್ರಾಮದ ನಿವಾಸಿ. ಈಕೆ ಚುಡಪಲಿ ಬ್ಲಾಕ್ ನಿಂದ ಸ್ಪರ್ಧಿಸುತ್ತಿದ್ದಾರೆ. ಭೋಪಾಲ್ ನಲ್ಲಿ ವಿದ್ಯಾಭ್ಯಾಸದ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದರು. 2015 ರಿಂದ ಮಾಡೆಲ್ ವೃತ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಇಂಡಿಯಾ ರನ್ವೇ ದಿವಾ ಬ್ಯೂಟಿ ಸ್ಪರ್ಧೆಯಲ್ಲಿ ಭಾಗವಹಿಸಿ ಐದನೇ ಸ್ಥಾನ ಗಳಿಸಿದ್ದಾರೆ. 2020 ರಲ್ಲಿ ಇಂಡಿಯನ್ ಸ್ಟೈಲ್ ಐಕಾನ್ ಸೌಂದರ್ಯ ಸ್ಪರ್ಧೆಯನ್ನು ಗೆಲ್ಲುತ್ತಾರೆ. ನಂತರ ಬಾಲಿವುಡ್ ಗೆ ಹಾರಲು ಯೋಜನೆ ಹಾಕಿದ್ದ ಪ್ರಿಯಾಂಕಾ ಈಗ ದಿಢೀರನೆ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಊರಿಗೆ ಬಂದ ಪ್ರಿಯಾಂಕಾ, ಚೂರು ಬದಲಾಗದ ಗ್ರಾಮವನ್ನು ನೋಡಿ, ಈ ಊರು ಉದ್ಧಾರ ಮಾಡಲು ರಾಜಕೀಯವೇ ಸೂಕ್ತ ಎಂದು ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ಮಾಧ್ಯಮಗಳಲ್ಲಿಯೂ ಹೇಳಿಕೆಯೊಂದನ್ನು ನೀಡುತ್ತಾರೆ ಕೂಡ.