ಮಂಗಳೂರು : ಬಾಡಿಗೆದಾರರೇ ಗಮನಿಸಿ| ಮನೆ ಲೀಸ್ ಗೆ ನಕಲಿ ದಾಖಲೆ ಸೃಷ್ಟಿ | ಲಕ್ಷಾಂತರ ರೂಪಾಯಿ ವಂಚನೆ ಪ್ರಕರಣ ಆರೋಪಿಗಳು ಅಂದರ್
ಫ್ಲ್ಯಾಟ್ ಲೀಸ್ ಗೆ ಕೊಡುವುದಾಗಿ ಹೇಳಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದನ್ನು ಮಹಿಳೆಯೊಬ್ಬರಿಗೆ ತೋರಿಸಿ ಅವರಿಂದ 5 ಲಕ್ಷ ರೂ.ಪಡೆದು ವಂಚಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವಾಮಂಜೂರಿನ ತೊಯಿಪೆ ಕಲ್ ನಿವಾಸಿ ಅಂದ್ರಾದೆ ( 31), ಹಾಗೂ ಪಳ್ನೀರ್ ಸ್ಟರಕ್ ರೋಡ್ ನ ಇಮ್ತಿಯಾಜ್ (43) ಬಂಧಿತರು. ಫೆ. 1 ರಂದು ಈ ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆಯ ವಿವರ :
ಬೆಳ್ತಂಗಡಿ ಮೂಲದ ಪ್ರಿಯ ಎಂಬುವವರು ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಜೂನ್ 2020 ರಂದು ಬಾಡಿಗೆ ಮನೆ ಪಡೆಯುವ ಹುಡುಕಾಟ ನಡೆಸುವಾಗ ಇವರಿಗೆ ಕದ್ರಿ ಪರಿಸರದ ಬ್ರೋಕರ್ ಪರಿಚಯ ಆಗಿದ್ದು, ಕೆ ಎಸ್ ರಾವ್ ರಸ್ತೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ನೆಲಮಹಡಿಯಲ್ಲಿ ಮನೆಯೊಂದು ಲೀಸ್ ಗೆ ಇರುವುದಾಗಿ ತಿಳಿಸಿದ್ದ. ನಂತರ ಮಹಿಳೆಗೆ ಆ ಮನೆ ಇಷ್ಟ ಆಗಿ, ಲೀಸ್ ಗೆ 5 ಲಕ್ಷ ಹಣ ಕೊಡುವುದಕ್ಕೆ ಮುಂದಾಗಿದ್ದರು. ಬ್ರೋಕರ್ ಬ್ರಿಜೇಶ್ ಮನೆ ಮಾಲೀಕ ಮುಹಮ್ಮದ್ ಅಶ್ರಫ್ ಎಂಬಾತನನ್ನು ಕರೆದುಕೊಂಡು ಬಂದು ತೋರಿಸಿ ಅಗ್ರಿಮೆಂಟ್ ಮಾಡಿ 5 ಲಕ್ಷ ಹಣ ಡಿಪಾಸಿಟ್ ಮಾಡಿ, ಅಶ್ರಫ್ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಾರೆ.
ನಂತರ ಮಹಿಳೆ ತನ್ನ ವಾಸವನ್ನು ಅಲ್ಲಿಗೆ ಬದಲಾಯಿಸುತ್ತಾರೆ. ಮೂರು ತಿಂಗಳ ನಂತರ ಮನೆಯ ನಿಜವಾದ ಮಾಲೀಕ ಮುಹಮ್ಮದ್ ಅಲಿ ಎಂಬುವರು ಮನೆಗೆ ಬಂದು ಬಾಡಿಗೆ ನೀಡುವಂತೆ ಒತ್ತಾಯಿಸಿದಾಗ, ಮಹಿಳೆಗೆ ತಾನು ಮೋಸ ಹೋದದ್ದು ತಿಳಿಯುತ್ತದೆ. ಈ ಬಗ್ಗೆ ನಕಲಿ ಡ್ಯಾಕ್ಯುಮೆಂಟ್ ಹೆಸರಲ್ಲಿ ವಂಚನೆ ಮಾಡಿರುವ ಬಗ್ಗೆ ಬಂದರು ಠಾಣೆಯಲ್ಲಿ ದೂರನ್ನು ಮಹಿಳೆ ನೀಡಿದ್ದರು.
ಈ ವಂಚಕರು ಇದೇ ರೀತಿ ಹಲವರಿಗೆ ಮೋಸ ಮಾಡಿದ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.