ಮುಸ್ಲಿಂ ಧರ್ಮದ ಪ್ರಾರ್ಥನಾ ಕೊಠಡಿಯಾಗಿ ಬದಲಾದ ರೈಲ್ವೆ ನಿಲ್ದಾಣದ ಕೂಲಿಗಳ ಕೋಣೆ !! | ಹಿಂದೂ ಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಂ.6ರಲ್ಲಿರುವ ಕೂಲಿಗಳ ಕೊಠಡಿಯೊಂದು ಮುಸ್ಲಿಮರ ಪ್ರಾರ್ಥನಾ ಕೊಠಡಿಯಾಗಿ ಮಾರ್ಪಾಡಾಗಿರುವ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿವೆ.
ಘಟನೆ ಕುರಿತಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ. ವೀಡಿಯೋದಲ್ಲಿ ಮೇಲೆ ಹೇಳಲಾದ ಕೊಠಡಿಯಲ್ಲಿ ಮುಸ್ಲಿಂ ಧರ್ಮದ ಹಮಾಲಿಗಳು ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂದಿತ್ತು.
ಸ್ಥಳಕ್ಕೆ ಭೇಟಿ ನೀಡಿದ್ದ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು, ರೈಲ್ವೆ ನಿಲ್ದಾಣದಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಾಣವಾಗುತ್ತಿದ್ದು, ಒಂದು ಸಮುದಾಯದ ಹಮಾಲಿಗಳು ಪ್ರಾರ್ಥನೆ ಸಲ್ಲಿಸಲು ಮುಂದಾಗಿದ್ದಾರೆ. ಯಾವ ಆಧಾರದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ ಎಂದು ರೈಲ್ವೆ ನಿಲ್ದಾಣದ ವ್ಯವಸ್ಥಾಪಕರನ್ನು ಪ್ರಶ್ನಿಸಿದ್ದಾರೆ.
ಅಲ್ಲದೆ, ಈ ಕೃತ್ಯ ರಾಷ್ಟ್ರೀಯ ಸುರಕ್ಷತಾ ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಮುಸ್ಲಿಂ ಹಮಾಲರಿಗೆ ಪ್ರಾರ್ಥನೆ ಸಲ್ಲಿಸಲು ನಿಲ್ದಾಣದ ಹೊರ ಭಾಗಗಳಲ್ಲಿ ಹಲವಾರು ಮಸೀದಿಗಳಿವೆ. ಹೀಗಿದ್ದರೂ, ನಿಲ್ದಾಣದ ಫ್ಲಾಟ್‌ಫಾರ್ಮ್‌ಗಳ ಮಧ್ಯದಲ್ಲಿ ಅವಕಾಶ ನೀಡಿರುವುದು ಷಡ್ಯಂತ್ರವಾಗಿದೆ. ಮುಂದೊಂದು ದಿನ ಈ ಸ್ಥಳವನ್ನು ಮಸೀದಿಯನ್ನಾಗಿ ಪರಿವರ್ತಿಸುವ ಸಾಧ್ಯತೆಯಿದೆ. ಆದ್ದರಿಂದ ಈ ಕೃತ್ಯಕ್ಕೆ ಅವಕಾಶ ನೀಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.