ವಾಟ್ಸಪ್ ಮೂಲಕ ಒಂದಾದ ಕಿವುಡ-ಮೂಗರ ಪ್ರೀತಿಯ ಪಯಣ| ಬರವಣಿಗೆ ಮೂಲಕ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿ ದಾಂಪತ್ಯಕ್ಕೆ ಕಾಲಿರಿಸಿದ ಜೋಡಿ |ವಿಶೇಷವಾದ ಈ ‘ಲವ್ ಬರ್ಡ್ಸ್ ‘ಗಳ ರೋಚಕ ಕಹಾನಿ ಇಲ್ಲಿದೆ ನೋಡಿ

ಪ್ರೀತಿಗೆ ಮಾತು ಮುಖ್ಯವಲ್ಲ ಭಾವನೆ, ಇಬ್ಬರ ನಡುವೆ ಇರುವ ಅನ್ಯೋನ್ಯತೆ ಮುಖ್ಯ ಎಂಬುದಕ್ಕೆ ಸಾಕ್ಷಿಯಾಗಿದೆ ಇವರಿಬ್ಬರ ಬಾಂಧವ್ಯ.ಹೌದು ಈ ಜೋಡಿ ವಿಸ್ಮಯದಲ್ಲಿ ಒಂದು ಎಂದೇ ಹೇಳಬಹುದು. ಯಾಕಂದ್ರೆ ಈ ಯುವ ಲವ್ ಬರ್ಡ್ಸ್ ಗಳು ಸಾಮಾನ್ಯರಂತೆ ಅಲ್ಲ,ಇದು ಕಿವುಡ -ಮೂಗರ ಪ್ರೀತಿಯ ಪಯಣ.

ಹೌದು.ಅವರಿಬ್ಬರೂ ಕಿವಿ ಕೇಳದ, ಮಾತು ಬಾರದ ಸ್ನೇಹಿತರು. ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತೆಯೇ ಅವರಿಬ್ಬರ ಮಧ್ಯದಲ್ಲಿನ ಸ್ನೇಹ ಪ್ರೀತಿಗೆ ತಿರುಗಿದೆ. ಇವರ ಪ್ರೇಮ ನಿವೇದನೆಗೆ ಕೊಂಡಿಯಾಗಿದ್ದು ವಾಟ್ಸ್‌ಆ್ಯಪ್‌.ಪರಸ್ಪರ ಸನ್ನೆ ಮೂಲಕವೇ ಸಂಭಾಷಿಸುವ ಈ ಯುವ ಜೋಡಿ ಪೋಷಕರ ವಿರೋಧದ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿರಿಸಿ, ಪ್ರೇಮ ಲೋಕದಲ್ಲಿ ತೇಲಾಡುತ್ತಿದ್ದಾರೆ.

ಈ ಜೋಡಿಯ ಹೆಸರು ಸಂಜು ಮತ್ತು ಅಕ್ಷತಾ. ಸಂಜು ವಾಲ್ಮೀಕಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ರಾಮದ ನಿವಾಸಿಯಾಗಿದ್ದಾರೆ. ಅಕ್ಷತಾ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದವರು. ಇವರಿಬ್ಬರು ಒಂದಾಗಿರುವುದೇ ಒಂದು ರೋಚಕ ಕಹಾನಿ.

ದಾವಣಗೆರೆಯ ಡಿಸಿಎಂ ಟೌನ್‌ಶಿಪ್‌ನಲ್ಲಿರುವ ಮೌನೇಶ್ವರ ಮೂಗರ ಮತ್ತು ಕಿವುಡರ ವಸತಿ ಶಾಲೆಯಲ್ಲಿ ಇವರಿಬ್ಬರೂ ಜತೆಯಲ್ಲೇ 1 ರಿಂದ 10 ನೇ ತರಗತಿವರೆಗೆ ಅಧ್ಯಯನ ಮಾಡಿದ್ರು. ಬಳಿಕ ಇಬ್ಬರು ತಮ್ಮ ತಮ್ಮ ಗ್ರಾಮಕ್ಕೆ ಮರಳಿದ್ದಾರೆ. ಈ ಹಂತದಲ್ಲೇ ಸಂಜು ಹಾಗೂ ಅಕ್ಷತಾ ನಡುವಿನ ಸ್ನೇಹ, ಪ್ರೀತಿಗೆ ತಿರುಗಿದ್ದು,10ನೇ ತರಗತಿ ಪೂರ್ಣಗೊಳಿಸಿದ ಬಳಿಕ ಇಬ್ಬರೂ ದೂರವಾಗಿದ್ದಾರೆ.ಸಂಜು ಬೆಂಗಳೂರಿಗೆ ತೆರಳಿ ಐಟಿಐ ಪೂರ್ಣಗೊಳಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಅವರಿಬ್ಬರ ಬಾಲ್ಯದ ಸ್ನೇಹವನ್ನು ಒಂದು ಮಾಡಿದ್ದು, ಮೊಬೈಲ್‌ನಲ್ಲಿರುವ ವಾಟ್ಸಾಪ್‌.ವಾಟ್ಸ್‌ ಆ್ಯಪ್‌ ಮೂಲಕವೇ ಪ್ರೇಮ ನಿವೇದನೆ ಮಾಡಿ ಪ್ರೀತಿಯನ್ನು ಗಟ್ಟಿಗೊಳಿಸಿದ್ದಾರೆ.

ಅದೊಂದು ದಿನ ಸಂಜು, ತನ್ನ ತಂದೆ-ತಾಯಿಗೆ ತಾನು ಪ್ರೀತಿಸಿರುವ ಅಕ್ಷತಾಳನ್ನು ಮದುವೆಯಾಗುವುದಾಗಿ ಬರವಣಿಗೆ ಮೂಲಕ ತನ್ನ ಅನಿಸಿಕೆ ಹಂಚಿಕೊಂಡಿದ್ದಾರೆ. ಮಗನ ಆಸೆಗೆ ಪೋಷಕರು ಸಂತೋಷದಿಂದಲೇ ಒಪ್ಪಿಗೆ ಸೂಚಿಸಿದ್ದಾರೆ.ಯಾವಾಗ ತನ್ನ ಹಾಗೂ ಅಕ್ಷತಾಳ ಪ್ರೀತಿಗೆ ಪೋಷಕರು ಒಪ್ಪಿಗೆಯ ಮುದ್ರೆ ಒತ್ತಿದರೋ, ಅಲ್ಲಿಗೆ ಸಂಜು ತನ್ನ ಪೋಷಕರ ನಿರ್ಧಾರವನ್ನು ಅಕ್ಷತಾಳಿಗೆ ಮುಟ್ಟಿಸಿದ್ದಾರೆ. ಕೊನೆಗೆ ಇಬ್ಬರೂ, ದಾವಣಗೆರೆಯ ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ಜನವರಿ 29 ರಂದು ತೆರಳಿ, ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಸಂಜು ಹಾಗೂ ಅಕ್ಷತಾ ಮದುವೆಯಾಗಿರುವ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಕೋಪಗೊಂಡ ಅಕ್ಷತಾ ಪೋಷಕರು, ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಚಿಗಟೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ನವ ದಂಪತಿಯನ್ನು ಠಾಣೆಗೆ ಕರೆ ತಂದ ಪೊಲೀಸರು ಇಬ್ಬರನ್ನೂ ಬರವಣಿಗೆ ಮೂಲಕ ವಿಚಾರಣೆಗೆ ಒಳಪಡಿಸಿದರು. ಆಗ ಪೊಲೀಸರು, ದೂರು ಕೊಟ್ಟ ಪೋಷಕರು ಹಾಗೂ ಸೊಸೆಯಾಗಿ ಸ್ವೀಕರಿಸಿದ ಸಂಜು ಪೋಷಕರನ್ನು ಕೂಡಿಸಿಕೊಂಡು ಬುದ್ಧಿ ಮಾತು ಹೇಳಿ, ಸಂಜು ಮತ್ತು ಅಕ್ಷತಾ ದಂಪತಿಗೆ ಯಾರಿಂದಲೂ ತೊಂದರೆಯಾಗದಂತೆ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ನೀವು ಹೇಳಿದ್ದನ್ನು ಪಾಲಿಸುತ್ತೇವೆ ಎಂದು ಠಾಣೆಯಲ್ಲಿ ವಾಗ್ದಾನ ಮಾಡುವ ಮೂಲಕ ಸಂಜು ಪೋಷಕರು ಸೊಸೆಯನ್ನು ಸೋಮವಾರ ಮನೆಗೆ ಕರೆದೊಯ್ದಿದ್ದಾರೆ.

Leave A Reply

Your email address will not be published.