ಕಡಬ: ಜೆಸಿಬಿ ಬಕೆಟ್ ಕದ್ದು ಸಿಕ್ಕಿಬಿದ್ದ ಕಳ್ಳರಿಗೆ ರಾಜಕೀಯ ಮುಖಂಡರ ಸಂಬಂಧಿಕರೆಂದು ರಾಜಮರ್ಯಾದಿ!! ಒಂದು ಪ್ರಕರಣ ಬೇಧಿಸಲು ತೆರಳಿದ್ದ ಪೊಲೀಸರು – ಇನ್ನೆಲ್ಲೋ ಕದ್ದು ಮಾರಲು ಬಂದ ಕಳ್ಳರು

ಕಡಬ: ಇಲ್ಲಿನ ತಹಶೀಲ್ದಾರ್ ಕಚೇರಿಯ ಬಳಿಯಲ್ಲಿರುವ ಪೆಟ್ರೋಲ್ ಪಂಪ್ ಬಳಿ ಇರಿಸಲಾಗಿದ್ದ ಜೆಸಿಬಿ ಯ ಬಕೆಟ್ ಒಂದನ್ನು ಕಳ್ಳರು ಎಗರಿಸಿದ್ದು, ಕಳ್ಳತನದ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಜೆಸಿಬಿ ಮಾಲೀಕ ಠಾಣೆಗೆ ದೂರು ನೀಡಿ ಕಳ್ಳತನವಾದ ಜೆಸಿಬಿಯ ಬಕೆಟ್ ಪಂಜದಲ್ಲಿರುವ ಗುಜರಿ ಅಂಗಡಿಯೊಂದರಲ್ಲಿ ಪತ್ತೆಯಾಗಿ, ಕಡಬದ ರಾಜಕೀಯ ಮುಖಂಡರೊಬ್ಬರ ಸಂಬಂಧಿಗಳಾದ ಆರೋಪಿ ಯುವಕರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೆಲ ಹೊತ್ತಿನಲ್ಲೇ ಮುಚ್ಚಳಿಕೆ ಬರೆಸಿಕೊಂಡು ಆರೋಪಿಗಳ ಬಿಡುಗಡೆ ಆಗಿದ್ದು ಪ್ರಕರಣ ರಾಜಿಯಲ್ಲಿ ಇತ್ಯರ್ಥವಾಗಿದೆ.ಸದ್ಯ ವಿಚಾರವು ಕಡಬ ಪರಿಸರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಕಳ್ಳರಿಗೂ ರಕ್ಷಣೆ ಕೊಡಲಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

 

ಘಟನೆ ವಿವರ:ಕಳೆದ ಕೆಲ ಸಮಯಗಳ ಹಿಂದೆ ಸದಾನಂದ ಎಂಬವರಿಗೆ ಸೇರಿದ ಜೆಸಿಬಿ ಯ ಬಕೆಟ್ ಒಂದನ್ನು ಪೆಟ್ರೋಲ್ ಪಂಪ್ ಬಳಿ ಇರಿಸಲಾಗಿದ್ದು, ಮೊನ್ನೆಯ ದಿನ ಜೆಸಿಬಿ ಚಾಲಕನಿಗೆ ಬಕೆಟ್ ನ ಅಗತ್ಯ ಬಿದ್ದು ಹುಡುಕಾಡಿದಾಗ ಬಕೆಟ್ ಕಳ್ಳತನವಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಜೆಸಿಬಿ ಮಾಲೀಕ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಬಳಿಕ ಕಳ್ಳತನವಾದ ಬಕೆಟ್ ಪಂಜದ ಗುಜರಿ ಅಂಗಡಿಯೊಂದರಲ್ಲಿ ಪತ್ತೆಯಾಗಿತ್ತು. ಈ ಸಂದರ್ಭ ಪೊಲೀಸರು ಗುಜರಿ ಅಂಗಡಿಗೆ ತೆರಳಿ ಕಳ್ಳರ ಮಾಹಿತಿ ಕಲೆ ಹಾಕಿದಾಗ, ಬಕೆಟ್ ಕದ್ದ ಕಳ್ಳರು ಇನ್ನೆಲ್ಲೋ ಕದ್ದ ಸಾಮಗ್ರಿಗಳನ್ನು ಅದೇ ಗುಜರಿ ಅಂಗಡಿಗೆ ಮಾರಲು ಬಂದಿದ್ದು ಪೊಲೀಸರಿಗೆ ಮುಖಾ ಮುಖಿಯಾಗಿ ಸಿಕ್ಕಿಬಿದ್ದಿದ್ದಾರೆ.

ಪೊಲೀಸರು ಇಬ್ಬರನ್ನೂ ವಿಚಾರಿಸಿ ಠಾಣೆಗೆ ಕರೆತಂದಿದ್ದು ಈ ವೇಳೆ ಕಳ್ಳರಿಬ್ಬರೂ ಕಡಬದ ಕೋಡಿಂಬಾಳ ನಿವಾಸಿಗಳೆಂದು, ಇಬ್ಬರೂ ಕಡಬದ ರಾಜಕೀಯ ಮುಖಂಡರೊಬ್ಬರ ಸಂಬಂಧಿಗಲೆಂದು ತಿಳಿದುಬಂದಿದೆ. ಬಳಿಕ ಇಬ್ಬರಲ್ಲೂ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದು, ಕಳ್ಳತನ ಪ್ರಕರಣ ರಾಜಿಯಲ್ಲಿ ಇತ್ಯರ್ಥವಾಗಿದೆ.

Leave A Reply

Your email address will not be published.