ಒಂದು ಕಾಲ್ ಮಾಡಿ ಕೊಡುತ್ತೇನೆಂದು ಮೊಬೈಲ್ ಕೇಳುವವರ ಬಗ್ಗೆ ಇರಲಿ ಎಚ್ಚರ !! | ಇಲ್ಲದಿದ್ದರೆ ಈತನಿಗಾದ ಸ್ಥಿತಿ ನಿಮಗೂ ಎದುರಾಗಬಹುದು
ಇತ್ತೀಚೆಗೆ ಮನುಷ್ಯರಿಗೆ ಅನುಕಂಪ ತೋರಿಸುವುದು ಕೂಡ ದೊಡ್ಡ ಅಪರಾಧವೆಂಬಂತೆ ಆಗಿದೆ. ಹೌದು, ಒಂದು ಕಾಲ್ ಮಾಡಿ ಕೊಡುತ್ತೇನೆ, ಸ್ವಲ್ಪ ನಿಮ್ಮ ಮೊಬೈಲ್ ಕೊಡಿ ಎಂದು ಯಾರಾದರೂ ಕೇಳಿದಾಗ ಸ್ವಲ್ಪವೂ ಯೋಚಿಸದೇ ಮೊಬೈಲ್ ನೀಡಿದರೆ, ಕೆಲವೊಮ್ಮೆ ಏನಾಗಬಹುದು ಎಂಬುದಕ್ಕೆ ಈ ಘಟನೆ ನೈಜ ಉದಾಹರಣೆಯಾಗಿದೆ.
ಒಂದು ಕಾಲ್ ಮಾಡಬೇಕು ಎಂದು ಮೊಬೈಲ್ ಪಡೆದುಕೊಂಡ ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಲೇ ಮೊಬೈಲ್ ಸಮೇತ ಪರಾರಿಯಾಗಿರುವ ಘಟನೆ ದಾವಣಗೆರೆಯ ಸರ್‌ಎಂವಿ ಕಾಲೇಜಿನ ಸಮೀಪದ ಶ್ರೀಗುರು ಕೊಟ್ಟೂರೇಶ್ವರ ಬೇಕರಿಯಲ್ಲಿ ನಡೆದಿದೆ.
ಕಿರಣ್‌ಕುಮಾರ್ ಮೊಬೈಲ್ ಕಳೆದುಕೊಂಡ ಬೇಕರಿ ಕಾರ್ಮಿಕ. ಅಯ್ಯೋ ಪಾಪ ಅಂತಾ ಮೊಬೈಲ್ ಕೊಟ್ಟಿದ್ದೇ ತಪ್ಪಾಯ್ತಾ ಎನ್ನುವಂತಾಗಿದೆ ಆತನ ಸ್ಥಿತಿ. ಮೊಬೈಲ್ ಬ್ಯಾಟರಿ ಲೋ ಆಗಿದೆ. ಕಾಲ್ ಮಾಡಬೇಕು ಸ್ವಲ್ಪ ನಿಮ್ಮ ಮೊಬೈಲ್ ಕೊಡ್ತಿರಾ ಎಂದು ಖತರ್ನಾಕ್ ಖದೀಮ ಮೊಬೈಲ್ ಕೇಳಿದ್ದಾನೆ. ಅಯ್ಯೋ ಪಾಪ ಏನೋ ತುಂಬಾ ಮುಖ್ಯವಾದ ವಿಷಯ ಇರಬೇಕು ಎಂದುಕೊಂಡು ಬೇಕರಿ ಕಾರ್ಮಿಕ ಮೊಬೈಲ್ ಕೊಟ್ಟಿದ್ದಾನೆ.
ಇತ್ತ ಮೊಬೈಲ್‌ನಲ್ಲಿ ಮಾತನಾಡಲು ಆರಂಭಿಸಿದ ಖದೀಮ ಮಾತನಾಡುತ್ತಲೇ ಮೊಬೈಲ್ ಸಮೇತ ಪರಾರಿಯಾಗಿದ್ದಾನೆ. ಕಿರಣ್ ಕುಮಾರ್ ಇತ್ತೀಚೆಗಷ್ಟೇ ಹೊಸ ಮೊಬೈಲ್ ಖರೀದಿಸಿದ್ದ. ಮೊಬೈಲ್ ಎಗರಿಸಿರುವ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.