ಸಾಮಾಜಿಕ ಜಾಲತಾಣ ಪೋಸ್ಟ್ ವಿಚಾರವಾಗಿ ವ್ಯಕ್ತಿಯ ಹತ್ಯೆ | ಮುಸ್ಲಿಂ ಧರ್ಮಗುರು ಅರೆಸ್ಟ್ !!
ಫೇಸ್ ಬುಕ್ ನಲ್ಲಿ ತಮ್ಮ ಧಾರ್ಮಿಕ ನಂಬಿಕೆಗಳಿಗೆ ನೋವುಂಟಾಗುವ ರೀತಿಯಲ್ಲಿ ಪೋಸ್ಟ್ ಹಾಕಿದ್ದಾನೆಂಬ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಗುಜರಾತ್ ನ ಎಟಿಎಸ್ ಅಧಿಕಾರಿಗಳು ಮುಸ್ಲಿಂ ಧರ್ಮಗುರುವನ್ನು ಬಂಧಿಸಿದ್ದಾರೆ.
ಕಿಶನ್ ಬೋಲಿಯಾ ಎಂಬಾತ ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ಪೋಸ್ಟ್ ಹಾಕಿದ್ದ ವ್ಯಕ್ತಿಯಾಗಿದ್ದು, ಇದರ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಆತನನ್ನು ಜ.25 ರಂದು ಗುಂಡಿಕ್ಕಿ ಹತ್ಯೆ ಮಾಡಿದ್ದರು. ತಮ್ಮ ಧಾರ್ಮಿಕ ಭಾವನೆಗಳಿಗೆ ಈ ಫೇಸ್ ಬುಕ್ ಪೋಸ್ಟ್ ನಿಂದ ನೋವಾಗಿದೆ ಎಂದೂ ಮುಸ್ಲಿಂ ಸಮುದಾಯದ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಎಟಿಎಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಕಮರ್ಗನಿ ಉಸ್ಮಾನಿ ಎಂಬ ಮುಸ್ಲಿಂ ಧಾರ್ಮಿಕ ಮುಖಂಡನನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಇದಕ್ಕೂ ಮುನ್ನ ಮೊಹಮ್ಮದ್ ಅಯೂಬ್ ಜವ್ರವಾಲ ಎಂಬಾತನನ್ನು ಅಹ್ಮದಾಬಾದ್ ನಿಂದ ಬಂಧಿಸಲಾಗಿತ್ತು.
ಎಟಿಎಸ್ ಸೂಪರಿಂಟೆಂಡೆಂಟ್ ಈ ಬಗ್ಗೆ ಮಾಹಿತಿ ನೀಡಿದ್ದು, ಬೊಲಿಯಾನ ಗುಂಡಿಕ್ಕಿ ಹತ್ಯೆ ಮಾಡಿದ್ದ ಶಬ್ಬೀರ್ ಚೊಪ್ಡಾ ಎಂಬಾತ ಉಸ್ಮಾನಿ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕದಲ್ಲಿದ್ದ. ಇಂತಹ ಯುವಕರಿಗೆ ಪ್ರವಾದಿ ಮೊಹಮ್ಮದ್ ಗೆ ಅವಮಾನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಮುಸ್ಲಿಂ ಧಾರ್ಮಿಕ ಗುರು ಪ್ರಚೋದನೆ ನೀಡುತ್ತಿದ್ದ. ಚೋಪ್ಡಾ (25) ಇಮ್ತಿಯಾಜ್ ಪಠಾನ್ (27) ಎಂಬ ಇಬ್ಬರನ್ನು ಇನ್ನಿಬ್ಬರು ಆರೋಪಿಗಳಿಗೆ ಪ್ರಚೋದನೆ ನೀಡಿದ್ದಕ್ಕಾಗಿ ಈಗಾಗಲೇ ಬಂಧಿಸಲಾಗಿದೆ.