ಎಲ್ಲಾ ಆಸ್ತಿಯನ್ನು ಕಾನೂನುಬದ್ಧವಾಗಿ ಖರೀದಿಸಿದ್ದೇನೆ | ರವಿ ಡಿ ಚನ್ನಣ್ಣನವರ್ ರಿಂದ ಪತ್ರಿಕಾ ಪ್ರಕಟಣೆ
ಬೆಂಗಳೂರು : ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಮೇಲೆ ಕೆಲವು ದಿನಗಳ ಹಿಂದೆ ಅಕ್ರಮ ಆಸ್ತಿ ಹೊಂದಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ವೈರಲ್ ಆಗಿತ್ತು. ಅನಂತರ ಅಂತಹ ಸುದ್ದಿಗಳನ್ನು ಪ್ರಕಟಿಸಬಾರದೆಂದು ರವಿ ಡಿ ಚನ್ನಣ್ಣನವರ್ ಅವರು ಕೋರ್ಟ್ ನಿಂದ ತಾತ್ಕಾಲಿಕ ತಡೆಯಾಜ್ಞೆ ಕೂಡಾ ತಂದಿದ್ದರು. ಈಗ ನನ್ನ ವಿರುದ್ಧ ಆರೋಪ ಮಾಡಿ ನನ್ನ ಚಾರಿತ್ರ್ಯಹರಣಕ್ಕೆ ಯತ್ನಿಸುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಪತ್ರಿಕಾ ಪ್ರಕಟಣೆಯೊಂದನ್ನು ನೀಡಿದ್ದಾರೆ.
ತಮ್ಮ ಬಗ್ಗೆ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಅಲ್ಲದೇ ನನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಸಿವಿಲ್ ಹಾಗೂ ಕ್ರಿಮಿನಲ್ ಮಾನಹಾನಿಕರ ಕೇಸು ದಾಖಲಿಸಿದ್ದೇನೆ. ಹಾಗೇಯೇ ನಾನು ದಾಖಲಿಸಿರುವ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥ ಆಗುವವರೆಗೆ ಮಾತನಾಡುವುದು ಸೂಕ್ತವಲ್ಲ, ಜೊತೆಗೆ ನನ್ನ ಬಗ್ಗೆ ಕೆಟ್ಟ ಪದ ಬಳಸಿ ಏನೂ ಬರೆಯಬಾರದೆಂದು ಕೂಡಾ ಹೇಳಿದ್ದಾರೆ.
ರವಿ ಡಿ ಚನ್ನಣ್ಣನವರ್ ನೀಡಿರುವ ಪತ್ರಿಕಾ ಪ್ರಕಟಣೆ ಪ್ರಕಾರ, ‘ನಾನು ಗಳಿಸಿರುವ ಆಸ್ತಿ ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ. ಬೇನಾಮಿಯಾಗಿ ಯಾವುದೇ ಆಸ್ತಿಯನ್ನು ಗಳಿಸಿಲ್ಲ. ನನ್ನ ಎಲ್ಲಾ ಆಸ್ತಿಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆಯನ್ನು ಕೂಡಾ ಪಾವತಿ ಮಾಡಿದ್ದೇನೆ. ಈ ಎಲ್ಲಾ ವಿವರ ಆದಾಯ ತೆರಿಗೆ ಇಲಾಖೆಗೆ ನೀಡಿದ್ದೇನೆ. ನನ್ನ ತೇಜೋವಧೆ ಮಾಡುತ್ತಿರುವ ಮಾಧ್ಯಮಗಳಿಗೆ ನ್ಯಾಯವಾದಿಗಳ ಮೂಲಕ ನೋಟಿಸ್ ಜಾರಿ ಮಾಡಿದ್ದೇನೆ. ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸುತ್ತಿರುವ ಸಂಬಂಧ ಮೂರು ಕೋಟಿ ರೂ. ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದೇನೆ. ಎರಡು ವರ್ಷ ಜೈಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.