ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕದೆ ಕಡೆಗಣಿಸಿದ ಬಿಜೆಪಿ!! ರೊಚ್ಚಿಗೆದ್ದ ಕಾರ್ಯಕರ್ತರಿಂದ ಪ್ರಧಾನಿ ಮೋದಿಯ ಪ್ರತಿಕೃತಿ ದಹಿಸಿ ಪ್ರತಿಭಟನೆ
ಬಿಜೆಪಿ ಪಾಳಯದಲ್ಲಿ ಮುಖಂಡರುಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು,ನಾಯಕರ ಮೇಲೆ ಮುನಿಸಿಕೊಂಡ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಪ್ರತಿಕೃತಿ ದಹನ ನಡೆಸಿದ ಘಟನೆ ಭಾನುವಾರದಂದು ಮಣಿಪುರದಲ್ಲಿ ನಡೆದಿದೆ.
ಮಣಿಪುರ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವೇಳೆ ನಡೆದ ಭಿನ್ನಾಭಿಪ್ರಾಯದಿಂದಾಗಿ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ ಎನ್ನಲಾಗಿದ್ದು, ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಿದ್ದೇ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಏನಿದು ಘಟನೆ: ಮುಂದಿನ ತಿಂಗಳು ಮಣಿಪುರ ವಿಧಾನ ಸಭಾ ಚುನಾವಣೆ ನಡೆಯಲಿದ್ದು, ಈ ಸಂಬಂಧ ಬಿಜೆಪಿಯು 60 ಮಂದಿ ಘಟಾನುಘಟಿಗಳಿಗೆ ಟಿಕೆಟ್ ಹಂಚಿಕೆ ಮಾಡಿತ್ತು.
ಬಿಜೆಪಿಯು ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ಬಿಜೆಪಿಯ ನಿಷ್ಠಾವಂತರು ಕುದಿದಿದ್ದು, ಕಾಂಗ್ರೆಸ್ ಹಾಗೂ ಬೇರೆ ಪಕ್ಷಗಳಿಂದ ಬಂದವರನ್ನು ಟಿಕೆಟ್ ಕೊಟ್ಟು ಪ್ರೋತ್ಸಾಹಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರನಡೆದಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ರಾಜೀನಾಮೆ ನೀಡಿದ ಕಾರ್ಯಕರ್ತರ ನಿಖರ ಸಂಖ್ಯೆ ತಿಳಿದುಬಂದಿಲ್ಲವಾದರೂ ಹಲವರು ಪಕ್ಷದಿಂದ ಹೊರನಡೆದ ಬಗ್ಗೆ ಮಾಹಿತಿಯೊಂದು ಹರಿದಾಡುತ್ತಿದೆ.ಟಿಕೆಟ್ ಹಂಚಿಕೆಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಿಂದ ಬಂದ 16 ಮಂದಿ ನಾಯಕರಲ್ಲಿ 10 ಮಂದಿಗೆ ಹಾಗೂ ಓರ್ವ ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡಿದೆ.
ಸದ್ಯ ಬಿಜೆಪಿ ಪಾಳಯದಲ್ಲಿ ಬಿರುಕು ಮೂಡಿದ್ದು,ಈ ಮಧ್ಯೆ ರೊಚ್ಚಿಗೆದ್ದ ಕಾರ್ಯಕರ್ತರು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಹಾಗೂ ಪ್ರಧಾನಿ ಮೋದಿಯ ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.