ಇನ್ನು ಮುಂದೆ ಎತ್ತಿನ ಬಂಡಿಗಳಿಗೂ ಬರಲಿದೆ ರೇಡಿಯಂ|ಅಪಘಾತ ತಪ್ಪಿಸಲು ಪೊಲೀಸರಿಂದ ವಿಶೇಷ ಉಪಾಯ
ಎತ್ತಿನ ಬಂಡಿಗಳಿಂದ ಹೆಚ್ಚಾಗಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಯಲು ಸಂಚಾರ ಪೊಲೀಸರು ಒಂದು ವಿಶೇಷ ಉಪಾಯ ಮಾಡುವ ಮೂಲಕ ಅವಘಡ ತಪ್ಪಿಸುವ ಪ್ರಯತ್ನದಲ್ಲಿದ್ದಾರೆ.
ಮಹಾರಾಷ್ಟ್ರ ತೆಲಂಗಾಣ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿಭಾಗ ಕಲಬುರಗಿಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಹಾಯ್ದು ಹೋಗುತ್ತದೆ. ಹೀಗಾಗಿ ಕರ್ನಾಟಕ ಮಹಾರಾಷ್ಟ್ರ ತೆಲಂಗಾಣ ಸಂಚಾರಕ್ಕಾಗಿ ನಿತ್ಯ ಅಪಾರ ಪ್ರಮಾಣದ ವಾಹನಗಳು ಓಡಾಟ ನಡೆಸುತ್ತವೆ. ಈ ಮಧ್ಯೆ ಹಲವು ಹೆದ್ದಾರಿಗಳಲ್ಲಿ ಎತ್ತಿನ ಬಂಡಿಗಳೂ ಕೂಡ ಓಡಾಡುತ್ತವೆ. ರಾತ್ರಿಯಾಗುತ್ತಿದ್ದಂತೆ ಕತ್ತಲಲ್ಲಿ ಎತ್ತಿನ ಬಂಡಿ ಕಾಣದೆ ಅನೇಕ ಸಲ ರಸ್ತೆ ಅಪಘಾತಗಳು ಸಂಭವಿಸಿವೆ.
ಹಾಗಾಗಿ ಈ ಎತ್ತಿನ ಬಂಡಿಗೆ ರೇಡಿಯಂ ಅಂಟಿಸಿದ್ದಾರೆ ಪೊಲೀಸರು. ರೇಡಿಯಂ ಸಹಾಯದಿಂದ ಒಂದು ವಾಹನ ತೆರಳುವಾಗ ಇನ್ನೊಂದು ವಾಹನಕ್ಕೆ ಹೇಗೆ ಗೋಚರಿಸುತ್ತದೆಯೋ, ಹಾಗೆಯೇ ಎತ್ತಿನ ಬಂಡಿಯೂ ಕೂಡ ಸಂಚರಿಸುತ್ತಿರುವುದು ಸುಲಭವಾಗಿ ಇತರ ವಾಹನ ಚಾಲಕರಿಗೆ ಕಾಣಿಸಲಿದೆ. ಹೀಗಾಗಿ ಸುತ್ತಮುತ್ತಲಿನ ಹಳ್ಳಿಗಳ ಬಂಡಿಗಳಿಗೆ ರೇಡಿಯಂ ಅಂಟಿಸುವ ಕಾರ್ಯ ಪೊಲೀಸರಿಂದ ನಡೆಯುತ್ತಿದೆ.
ಎತ್ತಿನ ಬಂಡಿಗೆ ರೇಡಿಯಂ ಅಂಟಿಸುತ್ತಿರುವ ಸಂಚಾರ ಪೊಲೀಸರು ನಗರ ಪೊಲೀಸ್ ಆಯುಕ್ತಾಲಯದ ಸಂಚಾರ ಉಪವಿಭಾಗದ ಅಧಿಕಾರಿಗಳು ರಾತ್ರಿ ಅಪಘಾತಗಳನ್ನು ತಡೆಯಲು ರೈತರ ಎತ್ತಿನ ಬಂಡಿಗಳಿಗೆ ಹೊಳೆಯುವ ರೇಡಿಯಂ ಅಂಟಿಸುತ್ತಿದ್ದಾರೆ. ವಾಹನಗಳ ಮೇಲೆ ಇರುವಂತೆ ಎತ್ತಿನ ಬಂಡಿಯ ಮುಂಭಾಗ, ಹಿಂಭಾಗ, ಅಕ್ಕಪಕ್ಕದಲ್ಲಿ ಹಾಗೂ ಎತ್ತುಗಳ ಕೊಂಬುಗಳಿಗೆ ರೇಡಿಯಂ ಅಂಟಿಸುವ ಕಾರ್ಯ ಕೈಗೊಂಡಿದ್ದಾರೆ.