ಕಡಬದಲ್ಲಿ ನಡುರಾತ್ರಿ ಮನೆಗೆ ನುಗ್ಗಿ ಅನುಚಿತವಾಗಿ ವರ್ತಿಸಿದ್ದ ಅರಣ್ಯಾಧಿಕಾರಿ ಸಂಧ್ಯಾ ಬೀದರ್‌ಗೆ ವರ್ಗಾವಣೆ

ಕಡಬ: ಅರಣ್ಯಾಧಿಕಾರಿಗಳ ವಿರುದ್ಧ ಮರಗಳ್ಳತನದ ದೂರು ನೀಡಿದ್ದ ದ್ವೇಷದಿಂದ ಐತ್ತೂರಿನ ಮೂಜೂರು ನಿವಾಸಿ ರೈತ ಪದ್ಮಯ್ಯ ಗೌಡರ ಮನೆಗೆ ದಾಳಿಯ ನೆಪದಿಂದ ತಡರಾತ್ರಿ ನುಗ್ಗಿ ಅಮಾನವೀಯವಾಗಿ ವರ್ತಿಸಿದ್ದ ಅರಣ್ಯಾಧಿಕಾರಿ ಸಂಧ್ಯಾ ಅವರನ್ನು ಬೀದರ್ ‌ನ ನೌಬಾದ್ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

 

ಸುಬ್ರಹ್ಮಣ್ಯ ಅರಣ್ಯ ವಲಯದ ಐತ್ತೂರು ರಕ್ಷಿತಾರಣ್ಯದಲ್ಲಿ ನಡೆದ ಮರಗಳ್ಳತನ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಭಾಗಿಯಾಗಿರುವ ಬಗ್ಗೆ ರೈತ ಪದ್ಮಯ್ಯ ಗೌಡರ ಪುತ್ರ ಪ್ರಸಾದ್ ದೂರು ನೀಡಿದ ದ್ವೇಷದಿಂದ ಅರಣ್ಯ ಇಲಾಖಾಽಕಾರಿಗಳು 2021ರ ಮಾ.2ರಂದು ತಡರಾತ್ರಿ ಪುಟ್ಟ ಮಗು ಇದ್ದ ಮನೆಗೆ ನುಗ್ಗಿ ಮನೆಯಲ್ಲಿದ್ದ ಮಹಿಳೆ ಹಾಗೂ ವೃದ್ಧೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು.

ಮನೆಯ ಅಟ್ಟಕ್ಕೆ ಮುಚ್ಚಿಗೆ ಹಾಕಿದ್ದ ಹಳೆಯ ಹಲಗೆಗಳನ್ನು ಕಿತ್ತು ತೆಗೆದು ಮರ ದಾಸ್ತಾನು ಇರಿಸಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿತ್ತು.
ದಾಳಿಯ ನೇತೃತ್ವ ವಹಿಸಿದ್ದ ಅಧಿಕಾರಿಯ ಜೊತೆ ಮರಗಳ್ಳತನ ಆರೋಪ ಹೊತ್ತಿರುವ ಅಧಿಕಾರಿ ಹಾಗೂ ಸಿಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.ಈ ಕುರಿತು ಅರಣ್ಯಾಧಿಕಾರಿಗಳು ತಮ್ಮ ಅಧಿಕಾರ ದುರುಪಯೋಪಡಿಸಿ, ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದುದರಿಂದ ಮಾನವ ಹಕ್ಕುಗಳನ್ನು ಉಲ್ಲಂಘಿಸಿ ದಬ್ಬಾಳಿಕೆ ನಡೆಸಿರುವ ಅರಣ್ಯಾಧಿಕಾರಿಗಳ ವಿರುದ್ಧ ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿತ್ತು.

ಅಲ್ಲದೆ ಮರಕಳ್ಳತನ ಕುರಿತಾದ ವರದಿ ಮಾಡಲು ತೆರಳಿದ್ದ ಕಡಬದ ಪತ್ರಕರ್ತರಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿ,ಅನುಚಿತವಾಗಿ ವರ್ತಿಸಿದ್ದರು.

ಪ್ರಕರಣದ ಹಿನ್ನೋಟ
ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದ ಐತ್ತೂರು ಭಾಗದ ಅರಣ್ಯದಲ್ಲಿ ಕೋಟ್ಯಾಂತರ ಪ್ರಮಾಣದ ಬೆಳೆಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಮಾರಾಟ ಮಾಡಲಾಗಿದೆ, ಇದರಲ್ಲಿ ಅರಣ್ಯಾಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಇದರ ವಿರುದ್ಧ ಐತ್ತೂರು ಗ್ರಾಮದ ಮೂಜೂರು ನಿವಾಸಿ ಪ್ರಸಾದ್ ಎನ್ನುವವರು ಸಾಕ್ಷಿ ಸಮೇತ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರು.

ಆದರೆ ಇದಕ್ಕೆ ಯಾವುದೇ ಸ್ಪಂದನ ದೊರೆಯದಿದ್ದಾಗ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಅವರಿಗೆ ದೂರು ನೀಡಲಾಗಿತ್ತು. ಆಗ ಶುರುವಾಯಿತು ತನಿಖಾ ಆದೇಶ, ಅರಣ್ಯ ಸಂಚಾರಿ ದಳದ ಮುಖ್ಯಸ್ಥೆ ಸಂಧ್ಯಾ ಅವರ ನೇತೃತ್ವದ ತಂಡ ತನಿಖೆಯ ಕಾರ್ಯಚರಣೆಗೆ ಇಳಿದಿತ್ತು.

ಇದರಿಂದ ಅರಣ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದ ಬುಡಕ್ಕೆ ನೀರು ಬರುವ ಸನ್ನಿವೇಶ ನಿರ್ಮಾಣವಾಗುತ್ತದೆ ಎನ್ನುವ ಪರಿಸ್ಥಿತಿ ಬಂದಾಗ ದೂರು ದಾರನ ಮೇಲೆ ಹಗೆ ಸಾಧನೆ ಮಾಡಲಾಗಿದೆ ಎನ್ನುವುದು ಪ್ರಸಾದ್ ಅವರ ಆರೋಪ.

2021ರ ಮಾರ್ಚ್ 2 ರಂದು ರಾತ್ರಿ ಸಂಚಾರಿ ದಳದ ಸಂಧ್ಯಾ ಅರಣ್ಯಾಧಿಕಾರಿಗಳು, ಪೋಲೀಸರು ಹಾಗೂ ಇನ್ನಿತರ ಕೆಲವು ಜನ ಪ್ರಸಾದ್ ಮನೆಗ ದಾಳಿ ನಡೆಸಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಇದಕ್ಕೆ ಪೂರಕವೆಂಬಂತೆ ದಾಳಿ ವೇಳೆ ದರ್ಪದಿಂದ ವರ್ತಿಸಿದ ವೀಡಿಯೋ ಕೂಡಾ ವೈರಲಾಗಿತ್ತು. ಅದೆ ದಿನ ರಾತ್ರಿ ಪ್ರಸಾದ್ ಅವರು ಮನೆಯಲ್ಲಿ ಇಲ್ಲದ ವೇಳೆ ಮನೆಯೊಳಗಿನ ಅಟ್ಟಕ್ಕೆ ಹಾಸಲಾಗಿದ್ದ ಮೂವತ್ತು ವರ್ಷ ಹಳೆಯದಾದ ಮರದ ಹಲಗೆಗಳನ್ನು ಕಿತ್ತು, ವಶಪಡಿಸಿಕೊಳ್ಳಲಾಗಿತ್ತು, ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗಿತ್ತು ಎನ್ನುವ ಆರೋಪ ಕೂಡಾ ಕೇಳಿ ಬಂತು. ಅಧಿಕಾರಿಗಳು ಮಾತ್ರವಲ್ಲದೆ ಐತ್ತೂರು ವಲಯದಲ್ಲಿ ಮರಳು ದಂಧೆಯಲ್ಲಿ ತೊಡಗಿಸಿಕೊಂಡಿರುವ ಅನ್ಯ ಮತೀಯ ವ್ಯಕ್ತಿಯೊಬ್ಬ ಬೂಟು ಕಾಲಿನಿಂದ ಒಳಗೆ ಪ್ರವೇಶಿಸಿ ದೇವರ ಕೋಣೆಗೆ ಹೋಗಿರುವುದಲ್ಲದೆ, ಅಟ್ಟಕ್ಕೆ ಹತ್ತಿ ಧಾರ್ಮಿಕ ಭಾವನೆಗೆ ದಕ್ಕೆ ಉಂಟು ಮಾಡಿದ್ದಾರೆ ಎಂದು ಮನೆಯವರು ಆರೋಪಿಸಿದ್ದರು.

ಬಳಿಕ ಪ್ರಸಾದ್ ಮೇಲೆ ಹೆಬ್ಬಲಸು ಮರ ಮತ್ತು ಇತರ ಬೆಳೆಬಾಳುವ ಮರಗಳನ್ನು ಕಡಿದು ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಈ ದಾಳಿ ವೇಳೆ ಪ್ರಸಾದ್ ತಾಯಿ ಸೀತಮ್ಮ ಅವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇದಕ್ಕೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಬಳಿಕ ನಡೆದ ಬೆಳವಣಿಗೆಯಲ್ಲಿ ಅರಣ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿಗಳು ದಾಂಧಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದರೂ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.

ಪ್ರಸಾದ್ ಅವರ ಕುಟಂಬದ ಬೆನ್ನಿಗೆ ನಿಂತು ಪ್ರಕರಣ ದಾಖಲಿಸಬೇಕೆಂದು ರೈತ ಸಂಘದ ಪ್ರಮುಖರು, ಮಲೆನಾಡು ಜನಹಿತರಕ್ಷಣಾ ಸಮಿತಿಯವರು ಕಡಬ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ನೀತಿ ತಂಡ ಎನ್ನುವ ಸಾಮಾಜಿಕ ಸಂಘಟನೆ ಕೂಡಾ ಪ್ರಸಾದ್ ಬೆಂಬಲಕ್ಕೆ ನಿಂತು, ಪ್ರತಿಭಟನೆ ಮನವಿ ಸಲ್ಲಿಸಿತು ಆದರೆ ಯಾವುದೇ ಪ್ರಯೋಜವಾಗಿರಲಿಲ್ಲ. ಇದರಿಂದ ಅಕ್ರೋಶಗೊಂಡ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಟಿ ಅವರು ಅರಣ್ಯಾಧಿಕಾರಿಗಳು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ಇಲ್ಲದಿದ್ದರೆ ಹಿಂಬರಹ ನೀಡಿ ಎಂದು ಆಗ್ರಹಿಸಿ ದರಣಿ ಸತ್ಯಾಗ್ರಹ ನಡೆಸಿದ್ದರು.

ನ್ಯಾಯಾಲಯದಲ್ಲಿ ಈ ಬಗ್ಗೆ ಖಾಸಗಿ ದೂರು ಸಲ್ಲಿಕೆಯಾಗಿದ್ದು, ಇದನ್ನು ಸ್ವೀಕರಿಸಿದ ನ್ಯಾಯಾಲಯ ದೌರ್ಜನ್ಯ ಎಸಗಿದ ಅರಣ್ಯಾಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ. ಈ ಹಿನ್ನಲೆಯಲ್ಲಿ ಕಳೆದ ಆರು ದಿವಸಗಳ ಕಾಲ ನಡೆದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಗಿತ್ತು.

ಇದೀಗ ಅರಣ್ಯಾಧಿಕಾರಿ ಸಂಧ್ಯಾ ಅವರ ವರ್ಗಾವಣೆಯಾಗಿದೆ.

Leave A Reply

Your email address will not be published.