ಜ್ವರ ಹಿನ್ನೆಲೆ ದಾಖಲಾದ ಹುಡುಗನಿಗೆ ಇಂಜೆಕ್ಷನ್ ನೀಡಿದ ವೈದ್ಯ | ವೈದ್ಯನ ಎಡವಟ್ಟಿನಿಂದ ಕಾಲನ್ನೇ ಕತ್ತರಿಸಬೇಕಾದ ಪರಿಸ್ಥಿತಿ| ವೈದ್ಯ ಕ್ಲಿನಿಕ್ ಮಾಲೀಕನ ವಿರುದ್ಧ ದೂರು ದಾಖಲಿಸಿದ ನೊಂದ ತಾಯಿ
ನಮ್ಮಲ್ಲಿ ವೈದ್ಯರನ್ನು ದೇವರು ಅಂತಾ ಹೇಳ್ತಾರೆ. ಅಂತಹ ವೈದ್ಯರೇ ನಮ್ಮ ಜೀವಕ್ಕೆ ಕುತ್ತು ತಂದರೆ ಏನಾಗಬಹುದು ? ಅದೇ ಇಲ್ಲಿ ಈಗ ನಡೆದಿರೋದು.
ಈ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ. ಎಲೆಕ್ಟ್ರಾನಿಕ್ ಸಿಟಿ ಬಿ.ಜಿ.ರಸ್ತೆಯ ನಿವಾಸಿ ಶಶಿಕಲಾ ನೀಡಿದ ದೂರಿನ ಮೇರೆಗೆ ವೈದ್ಯರಾದ ಡಾ.ಅಶೋಕ್ ಮತ್ತು ಕ್ಲಿನಿಕ್ ಮಾಲೀಕ ಆರೋಗ್ಯಸ್ವಾಮಿ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಶಶಿಕಲಾ ಕೂಲಿ ಕೆಲಸ ಮಾಡಿ ತನ್ನ ಜೀವನವನ್ನು ಹೇಗೋ ಸಾಗಿಸುತ್ತಿದ್ದರು. ಇವರ ಮಗ ಅಭಿ ( 18) ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಜ.6 ರಂದು ಬೇಗೂರಿನ ಮೈಲಸಂದ್ರದಲ್ಲಿರುವ ಕ್ಲಿನಿಕ್ ನಲ್ಲಿ ಆರೋಗ್ಯ ತಪಾಸಣೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅಲ್ಲಿದ್ದ ಡಾಕ್ಟರ್ ಅಶೋಕ್ ಅಭಿಗೆ ಇಂಜೆಕ್ಷನ್ ನೀಡಿದ್ದರು. ಇದಾದ ನಂತರ ಅಭಿ ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಇಂಜೆಕ್ಷನ್ ನೀಡಿದ ಜಾಗದಿಂದ ಇಡೀ ಕಾಲಿಗೆ ಸೋಂಕು ಹರಡಿ ಇನ್ಫೆಕ್ಷನ್ ಆಗಿದೆ. ಮತ್ತೆ ಅದೇ ಕ್ಲಿನಿಕ್ ಗೆ ಬಂದು ತೋರಿಸಿದಾಗ ವೈದ್ಯರಿಗೆ ತಮ್ಮ ತಪ್ಪಿನ ಅರಿವಾಗಿದೆ. ಹೀಗಾಗಿ ತಾವು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲು ತಾವೇ ಸೋಂಕಿಗೆ ಚಿಕಿತ್ಸೆ ನೀಡುವುದಾಗಿ ಕ್ಲಿನಿಕ್ ಮಾಲೀಕ ಆರೋಗ್ಯಸ್ವಾಮಿ ಹೇಳಿದ್ದರು. ನಂತರ ಜಿಗಣಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಕೊಡಿಸಿದ್ದರು. ಆದರೆ, ಈಗ ತಮ್ಮಿಂದ ಚಿಕಿತ್ಸೆ ಕೊಡಿಸಲು ಸಾಧ್ಯವಿಲ್ಲ ಎಂದು ಕ್ಲಿನಿಕ್ ನವರು ತಗಾದೆ ತೆಗೆದಿದ್ದಾರೆ. ಈಗ ಕಾಲಿಗೆ ತಗುಲಿದ ಸೋಂಕಿನಿಂದ ಅಭಿ ತನ್ನ ಕಾಲನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾನೆ.
ಈಗ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಶಿಕಲಾ ಆಗ್ರಹಿಸಿದ್ದಾರೆ.
ಪೊಲೀಸರು ವೈದ್ಯರ ಎಡವಟ್ಟಿನಿಂದಲೇ ಇನ್ ಫೆಕ್ಷನ್ ಆಗಿದೆಯೇ ಅಥವಾ ಬೇರೆ ಏನಾದರೂ ಕಾರಣ ಇರಬಹುದೇ ಎಂಬ ಬಗ್ಗೆ ತಜ್ಞ ವೈದ್ಯರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.