ವಿಟ್ಲ: ಈ ಬಾರಿಯು ದ.ಕ ಜಿಲ್ಲೆಗೆ ಒಲಿಯಿತು ಪದ್ಮಶ್ರೀ!! ಸತತ ಏಳು ಸುರಂಗ ಕೊರೆದು ನೀರು ಹರಿಸಿ ಕೃಷಿಯಲ್ಲಿ ಖುಷಿ ಕಂಡ ಏಕೈಕ ಸಾಧಕ ವಿಟ್ಲ ಮಹಾಲಿಂಗ ನಾಯ್ಕ್ ಮುಡಿಗೇರಿತು ಪ್ರಶಸ್ತಿ
ವಿಟ್ಲ: ತನ್ನ ಅವಿರತ ಪ್ರಯತ್ನದಿಂದ ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದು, ನೀರು ಹರಿಸಿ ಬೋಳು ಗುಡ್ಡೆಯನ್ನು ಹಚ್ಚ ಹಸಿರ ನಂದನವನ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ ಧೀರನಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.
ಹೌದು, ಬಂಟ್ವಾಳ ತಾಲೂಕಿನ ವಿಟ್ಲ ಅಡ್ಯನಡ್ಕ ಅಮೈ ನಿವಾಸಿ 73ರ ಹರೆಯದ ಮಹಾಲಿಂಗ ನಾಯ್ಕ್ ಅವರು ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆಧುನಿಕ ವ್ಯವಸ್ಥೆಗಲಿಲ್ಲದ ಹಿಂದಿನ ಕಾಲದಲ್ಲಿ ಸುರಂಗ ವ್ಯವಸ್ಥೆಯ ಮೂಲಕ ನೀರಿನ ಹರಿವನ್ನು ಹರಿಸಿ, ಆ ನೀರಿನ ಮೇಲಿನ ನಂಬಿಕೆಯಿಂದ ಕೃಷಿ ಚಟುವಟಿಕೆ ಪ್ರಾರಂಭಿಸಿದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ತಾಲೂಕಿನ ಮಹಾಲಿಂಗ ನಾಯ್ಕ್ ಹಾಗೂ ಅವರ ಸಾಧನೆ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿ.ಸರಿ ಸುಮಾರು 30-40 ವರ್ಷಗಳ ಹಿಂದೆ ಕಾಡು-ಕುಂಟೆಗಳಿಂದ ತುಂಬಿದ್ದ ಬೋಳುಗುಡ್ಡೆಯನ್ನು, ತನ್ನ ಚಮತ್ಕಾರ ಬಳಸಿ ಯಾವುದೇ ಪಂಪ್-ಇತರ ವಿದ್ಯುತ್ ಉಪಕರಣಗಲಿಲ್ಲದೇ, ತಾನೇ ಸುರಂಗ ಕೊರೆದು ನೀರು ಹರಿಸಿ ಕೃಷಿ ಭೂಮಿಯನ್ನಾಗಿ ಪರಿವವರ್ತಿಸಿದ್ದಾರೆ.
ಹಲವು ತಿಂಗಳುಗಳ-ಹಲವಾರು ವರ್ಷಗಳ ಕಾಲ ದಟ್ಟವಾದ ಗುಡ್ಡವನ್ನು ಅಗೆದು ಒಮ್ಮೆಗೆ ಹತ್ತರಂತೆ ಗಿಡವನ್ನು ನಾಟಿ ಮಾಡುವ ಮೂಲಕ ಇಡೀ ಜಮೀನಿಲ್ಲಿ ಕೃಷಿಯ ಕಂಪನ್ನು ಪಸರಿಸಿದ್ದ ನಾಯ್ಕ್ ರು ಬೆಳೆದ ಬೆಳೆಗಳಿಗೆ ನೀರಿನ ಹರಿವು ಅಗತ್ಯವಾದಾಗ ತಮ್ಮ ಜಮೀನಿನಲ್ಲಿ ಐದು ಪುಟ್ಟ ಕಟ್ಟಪುಣಿ ಮಾಡಿ ಅದರಲ್ಲಿ ಮಳೆಗಾಲದಲ್ಲಿ ನೀರನ್ನು ಉಳಿಸುವಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.
ಒಬ್ಬರೇ ಮಣ್ಣನ್ನು ಅಗೆದು, ಒಬ್ಬರೇ ತಲೆಯ ಮೇಲೆ ಹೊರುವ ಮೂಲಕ ಇಡೀ ಜಮೀನಿನನ್ನು ಕೃಷಿಯನ್ನು ಬೆಳೆದ ಸಾಧನೆಗೆ ಪ್ರಶಸ್ತಿ ಒಲಿದಿರುವುದು ನಿಜಕ್ಕೂ ಶ್ಲಾಘನೀಯ.ತನ್ನ ಮನೆಯನ್ನು ನಿಭಾಯಿಸಲು ಹಗಲು ಹೊತ್ತು ತೋಟದ ಕೆಲಸಕ್ಕೆ ತೆರಳಿ, ರಾತ್ರಿ ಹೊತ್ತು ತನ್ನ ಸಾಧನೆಗೆ ಮುಡಿಪಾಗಿಟ್ಟ ಈ ಧೀರ,ಒಂದು ಕಾಲದಲ್ಲಿ ಹಲವರ ತಮಾಷೆಗೆ ಕಾರಣವಾಗಿದ್ದರು ಎನ್ನುವುದು ಬೇಸರದ ಸಂಗತಿ.
ತಾನು ಸುರಂಗ ಕೊರೆಯುತ್ತಿರುವ ಸಂದರ್ಭದಲ್ಲಿ “ಇಲ್ಲಿ ನೀರು ಸಿಗಬೇಕಾದರೆ ಮೂತ್ರವೇ ಮಾಡಬೇಕು” ಎನ್ನುವ ನೆರೆಹೊರೆಯ ಮಂದಿಗಳ ತಮಾಷೆಯ ಆ ಮಾತುಗಳು ಆ ಕ್ಷಣಕ್ಕಷ್ಟೇ ಸೀಮಿತವಾಗಿತ್ತು.
ಏಕಾಂಗಿಯಾಗಿ ಮಾಡಿದ ನಾಯ್ಕ್ ರ ಈ ಸಾಧನೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ, ಕೃಷಿಯ ಹಿಂದಿನ ಕಷ್ಟ ಹಾಗೂ ಆ ಬಳಿಕ ಸಿಗುವ ಕೃಷಿಯ ಸುಖ ಹೇಗಿರುತ್ತದೆ ಎಂಬುವುದಕ್ಕೆ ಮಹಾಲಿಂಗ ನಾಯ್ಕ್ ಅವರ ಸಾಧನೆಯೇ ಉದಾಹರಣೆ, ಅದೇ ಉತ್ತರ.