ಹೆತ್ತ ತಂದೆಯನ್ನು ಹೊರಹಾಕಿದ ಮಗನಿಗೆ ತಕ್ಕ ಪಾಠ ಕಲಿಸಿದ ಕೋರ್ಟ್ |ನ್ಯಾಯಾಲಯದ ಆದೇಶದಂತೆ ಮಗ-ಸೊಸೆಯನ್ನೇ ಹೊರ ದಬ್ಬಿದ ಪೊಲೀಸ್
ತಮ್ಮ ಸಂಧ್ಯಾಕಾಲದಲ್ಲಿ ತಮಗೆ ಆಸರೆ ಆಗುತ್ತಾರೆಂದು ಹೆತ್ತವರು ಮಕ್ಕಳನ್ನು ಬಹಳ ಪ್ರೀತಿಯಿಂದ ಸಾಕುತ್ತಾರೆ. ಅವರು ಕೇಳಿದ್ದನ್ನೆಲ್ಲಾ ಕೊಡುತ್ತಾರೆ. ಅವರ ಸುರಕ್ಷತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಸುತ್ತಾರೆ. ಆದರೆ ಮಕ್ಕಳು ದೊಡ್ಡವರಾದ ಮೇಲೆ ಇದನ್ನೆಲ್ಲಾ ಮರೆತು ತಂದೆ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದೇ ಎಲ್ಲೋ ಅನಾಥಾಶ್ರಮದಲ್ಲಿ ಬಿಟ್ಟು, ಅವರನ್ನು ಅನಾಥರನ್ನಾಗಿ ಮಾಡಿಬಿಡುತ್ತಾರೆ. ಸಂಬಂಧಗಳಿಗೆ ಇರುವ ಬೆಲೆಯೇ ಇಷ್ಟು ಅನ್ನುವ ಹಾಗೇ ನಡೆದುಕೊಳ್ಳುತ್ತಾರೆ ಕೆಲವು ಮಕ್ಕಳು.ಇಂಥದ್ದೇ ಒಂದು ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ನಿವೃತ್ತ ಪ್ರಾಧ್ಯಾಪಕ ಮುನಿಸ್ವಾಮಿ ಅವರನ್ನು ಮಗ ಎಂ ಸುಭಾಷ್ ಮತ್ತು ಸೊಸೆ ಮಂಜುಳಾ ಬಲವಂತವಾಗಿ ಮನೆಯಿಂದ ಹೊರಹಾಕಿದ್ದರು. ಮುನಿಸ್ವಾಮಿ ಅವರು ಅಂಜನಿ ಬಡಾವಣೆಯ ಮನೆಯನ್ನು ಮುನಿಸ್ವಾಮಿ ಸ್ವಯಾರ್ಜಿತವಾಗಿ ಖರೀದಿಸಿದ್ದರು. ತಾನು ಹೆತ್ತು ಹೊತ್ತು ಸಾಕಿದ ಮಗನೇ ಮನೆಯಿಂದ ಹೊರ ಹಾಕಿದ್ದನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರದ ಎಸಿ ಕೋರ್ಟ್ ಮತ್ತು ಹೈಕೋರ್ಟ್ ಗಳಲ್ಲಿ ಮುನಿಸ್ವಾಮಿ ಅರ್ಜಿ ಸಲ್ಲಿಸಿದ್ದರು. ಇದೀಗ ವಿಚಾರಣೆ ನಡೆಸಿರುವ ಕೋರ್ಟ್, ಅಕ್ರಮವಾಗಿ ಮನೆ ಪ್ರವೇಶಿಸಿದ್ದ ಮಗ ಸುಭಾಷ್ ಮತ್ತು ಸೊಸೆ ಮಂಜುಳಾರನ್ನು ಹೊರಹಾಕಿ ಮುನಿಸ್ವಾಮಿ ಅವರಿಗೆ ಪ್ರವೇಶ ಕಲ್ಪಿಸುವಂತೆ ಪೊಲೀಸರಿಗೆ ಆದೇಶ ಹೊರಡಿಸಿದೆ.
ಮನೆಯಿಂದ ತಂದೆಯನ್ನು ಹೊರಹಾಕಿದ್ದ ಮಗನಿಗೆ ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದೆ. ಮನೆಯಿಂದಲೇ ಮಗನನ್ನು ಹೊರಹಾಕುವಂತೆ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.ಕೋರ್ಟ್ ಆದೇಶದಂತೆ ಮಗ ಸೊಸೆಯನ್ನು ಹೊರಹಾಕಿದ ಚಿಂತಾಮಣಿ ಪೊಲೀಸರು ಮುನಿಸ್ವಾಮಿಗೆ ಪ್ರವೇಶ ಕಲ್ಪಿಸಿದ್ದಾರೆ.
ಮಗ, ಸೊಸೆ ಹಿಡಿಶಾಪ ಹಾಕಿ ಮನೆಯಿಂದ ಹೊರ ಹೋಗಿದ್ದಾರೆ. ತಂದೆ ತಾಯಿಯರನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳಿಗೆ ನ್ಯಾಯಾಲಯ ಕೊಟ್ಟ ಈ ತೀರ್ಪು ಎಚ್ಚರಿಕೆಯ ಗಂಟೆಯೂ ಹೌದು, ಪ್ರಶಂಸನೀಯ ಕೂಡಾ ಹೌದು.