ಸ್ಮಾರ್ಟ್ ಫೋನ್ ಖರೀದಿಸಿದಳೆಂದು ಹೆಂಡತಿಯನ್ನು ಕೊಲ್ಲಲು ಸುಪಾರಿ ಕಿಲ್ಲರ್ ನ್ನು ನೇಮಿಸಿದ ಪತಿ|ಹತ್ಯೆ ಯತ್ನಕ್ಕೆ ಕ್ಷುಲ್ಲಕ ಕಾರಣ ನೆಪ,ಪತಿ ಅಂದರ್
ಹೆಂಡತಿ ಸ್ಮಾರ್ಟ್ ಫೋನ್ ನನ್ನು ತನ್ನ ಅನುಮತಿ ಇಲ್ಲದೆನೇ ಖರೀದಿಸಿದಳು ಎನ್ನುವ ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನು ಕೊಲ್ಲಲು ಸುಪಾರಿ ಕಿಲ್ಲರ್ ನನ್ನು ನೇಮಕ ಮಾಡಿದ್ದಾನೆ ಪತಿರಾಯ.
ಈ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ 40 ವರ್ಷದ ವ್ಯಕ್ತಿಯೊಬ್ಬನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಕೆಲ ತಿಂಗಳ ಹಿಂದೆ ಬಂಧಿತನ ಹೆಂಡತಿ ಸ್ಮಾರ್ಟ್ ಫೋನ್ ಕೊಡಿಸುವಂತೆ ತನ್ನ ಗಂಡನಲ್ಲಿ ಕೇಳಿದ್ದಾಳೆ. ಆದರೆ ಆತ ತೆಗೆದುಕೊಡಲಿಲ್ಲ. ನಂತರ ಈಕೆಯೇ ಟ್ಯೂಷನ್ ಕ್ಲಾಸ್ ತಗೊಂಡು ಬಂದ ಹಣದಲ್ಲಿ ಹಣ ಉಳಿಸಿ ಹೊಸ ವರ್ಷದ ದಿನದಂದು ಸ್ಮಾರ್ಟ್ ಫೋನ್ ಖರೀದಿಸಿದ್ದಾಳೆ. ಇದು ಗಂಡನ ಕೋಪಕ್ಕೆ ಕಾರಣವಾಗಿದೆ.ಹಾಗಾಗಿ ಈ ಕೆಲಸಕ್ಕೆ ಆತ ತನ್ನ ಪರಿಚಯದ ಸಹಚರನನ್ನು ಸಂಪರ್ಕಿಸಿ ಪ್ಲ್ಯಾನ್ ಮಾಡಿದ್ದಾನೆ.
ಮನೆಯ ಮುಖ್ಯದ್ವಾರಕ್ಕೆ ಬೀಗ ಹಾಕಿ ಬರುತ್ತೇನೆಂದು ಹೋದ ಪತಿ ಎಷ್ಟು ಹೊತ್ತಾದರೂ ಬಾರದೇ ಇದ್ದಾಗ, ಹೆದರಿಕೊಂಡ ಪತ್ನಿ ಆತನನ್ನು ಹುಡುಕಿಕೊಂಡು ಹೋಗುತ್ತಾಳೆ. ಈ ಸಮಯದಲ್ಲಿ ಆಕೆ ಹೊರಬರುವುದನ್ನು ಅಲ್ಲೇ ಕಾದಿದ್ದ ಸುಪಾರಿ ಕಿಲ್ಲರ್ ಚೂಪಾದ ಕತ್ತಿಯಿಂದ ಆಕೆಯ ಕುತ್ತಿಗೆಗೆ ದಾಳಿ ಮಾಡುತ್ತಾನೆ. ಈ ದಾಳಿಯಿಂದ ಆಕೆಗೆ ತೀವ್ರ ರಕ್ತಸ್ರಾವ ಉಂಟಾಗುತ್ತೆ. ಆದರೂ ಎದೆಗುಂದದೆ ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಓಡಿ ಬಂದು ಜೋರಾಗಿ ಕಿರುಚಾಡಿದ್ದಾಳೆ. ಇವಳ ಬೊಬ್ಬೆ ಕೇಳಿ ಈಕೆಯನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ಪ್ರಾಣ ಉಳಿಸಿದ್ದಾರೆ.
ಕೋಲ್ಕತ್ತಾದ ದಕ್ಷಿಣ ಹೊರವಲಯದಲ್ಲಿರುವ ನರೇಂದ್ರಪುರದಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಆರೋಪಿಗಳು ಚೂಪಾದ ವಸ್ತುಗಳಿಂದ ಮಹಿಳೆಯ ಕುತ್ತಿಗೆಗೆ ದಾಳಿ ಮಾಡಿದ್ದರಿಂದ ಆಕೆಯ ಗಂಟಲಿಗೆ ಏಳು ಹೊಲಿಗೆ ಹಾಕಲಾಗಿದೆ. ತನಿಖೆಯಿಂದ ಈ ಮಹಿಳೆಯ ಮೇಲೆ ದಾಳಿ ಮಾಡಿದ್ದು ಗಂಡ ಹೇಳಿದ್ದರಿಂದಲೇ ಎಂದು ತಿಳಿದು ಬಂದಿದೆ. ಪೊಲೀಸರು ಮಹಿಳೆಯ ಪತಿ, ಆತ ನೇಮಿಸಿದ ಸುಪಾರಿ ಕಿಲ್ಲರನ್ನು ಬಂಧಿಸಿದ್ದಾರೆ.