ಬಟ್ಟೆ ಮಡಚುವುದೇ ಈಕೆಯ ಉದ್ಯೋಗ ! ವಾರ್ಡ್ ರೋಬ್ ಸರಿಪಡಿಸಿ ಅದನ್ನೇ ಉದ್ಯೋಗ ಮಾಡಿಕೊಂಡ ಮಹಿಳೆ ! ಗಂಟೆಗೆ 2000 ರೂ. ಸಂಪಾದನೆ
ಮೊನ್ನೆ ಯುವಕನೊಬ್ಬ ಇನ್ನೊಬ್ಬರ ಬದಲಿಗೆ ಕ್ಯೂ ನಲ್ಲಿ ನಿಂತು ದುಡ್ಡು ಮಾಡುವ ಸ್ವ ಉದ್ಯೋಗವನ್ನು ಹುಟ್ಟು ಹಾಕಿದ್ದ. ಈಗ ಈಕೆಯ ಸರದಿ. ಈಕೆ ಇನ್ನೊಂದು ಸಾಂಪ್ರದಾಯಿಕವಲ್ಲದ ಸೆಲ್ಫ್ ಎಂಪ್ಲಾಯ್ಮೆಂಟ್ ಹುಡುಕಿ ಕೊಂಡಿದ್ದಾಳೆ.
ಹೆಣ್ಣುಮಕ್ಕಳಿಗೆ ವಾರ್ಡ್ ರೋಬ್ ನಲ್ಲಿ ಬಟ್ಟೆ ಜೋಡಿಸುವ ಕೆಲಸವೆಂದರೆ ಕಷ್ಟಕರದ ಕೆಲಸ ಎಂದರೆ ತಪ್ಪಾಗಲಾರದು. ಎಷ್ಟೇ ಚೆನ್ನಾಗಿ ಜೋಡಿಸಿಟ್ಟರೂ ಮತ್ತೆ ಎಲ್ಲಾ ಕೆದಕಿ ಚೆಲ್ಲಾಪಿಲ್ಲಿಯಾಗಿ ಹರಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ 19 ವರ್ಷದ ಯುವತಿಯೋರ್ವಳು ಅಸ್ತವ್ಯಸ್ತವಾಗಿರುವ ವಾರ್ಡ್ ರೋಬನ್ನು ಸರಿಪಡಿಸಿ ಸಂಪಾದನೆ ಮಾಡುತ್ತಾಳೆ. ಇದನ್ನೇ ಒಂದು ಉದ್ಯೋಗವನ್ನಾಗಿ ಕೂಡಾ ಮಾಡಿಕೊಂಡಿದ್ದಾಳೆ ಅಂದರೆ ನಂಬುತ್ತೀರಾ ? ಹೌದು ನಿಜ.
ಬ್ರಿಟನ್ ನ ಲೀಸೆಸ್ಟರ್ ನ ಯಲ್ಲಾ ಮೆಕ್ ಮಾಹನ್ ಎಂಬ ಯುವತಿಯೇ ಈ ವಿಶಿಷ್ಟ ಉದ್ಯೋಗ ಸೃಷ್ಟಿ ಮಾಡಿರುವುದು.
ಈಕೆ ಪ್ರತಿದಿನ ಮೂರರಿಂದ ಒಂಭತ್ತು ಗಂಟೆಗಳ ಕಾಲ ಈ ಕೆಲಸ ಮಾಡುತ್ತಾಳೆ. ಬಟ್ಟೆಗಳನ್ನು ಬಣ್ಣದ ಆಧಾರದಲ್ಲಿ ಜೋಡಿಸುವುದು ಮಾಡುತ್ತಾಳೆ. ಇದಕ್ಕೆ ಆಕೆ ದೊಡ್ಡ ಮೊತ್ತವನ್ನು ಪಡೆಯುತ್ತಾಳೆ ಕೂಡಾ. ಇದರಿಂದ ಆಕೆ ಪ್ರತಿ ತಿಂಗಳು 500 ಯುರೋ ಅಂದರೆ, ಭಾರತೀಯ ಕರೆನ್ಸಿಯಲ್ಲಿ lekka haa ಸುಮಾರು ₹50,000/- ಸಂಪಾದನೆ ಮಾಡುತ್ತಿದ್ದಾಳೆ.
“ನನಗೆ ಎಲ್ಲವೂ ಅಚ್ಚುಕಟ್ಟಾಗಿ ಇಡುವುದೆಂದರೆ ತುಂಬಾ ಇಷ್ಟ. ಇದಕ್ಕಾಗಿ ನಾನು ಇಡೀ ದಿನ ಬೇಕಾದರೂ ಕೆಲಸ ಮಾಡಲು ಸಿದ್ಧ” ಎಂದು ಯಲ್ಲಾ ಹೇಳುತ್ತಾಳೆ.
ಸುಮಾರು ಮೂರು ಗಂಟೆಗಳಲ್ಲಿ ಒಂದು ವಾರ್ಡ್ ರೋಬ್ ಜೋಡಿಸಬಹುದು. ಸಾಮಾನ್ಯವಾಗಿ ವಾರ್ಡ್ ರೋಬ್ ಗಾತ್ರದ ಮೇಲೆ ಇದು ನಿರ್ಧಾರವಾಗುತ್ತದೆ. ನಾನು ಈ ಮೊದಲು ಒಂದು ವಾರ್ಡ್ ರೋಬ್ ನ ಬಟ್ಟೆ ಸೆಟ್ ಮಾಡಲು 9 ಗಂಟೆ ತಗೊಂಡಿದ್ದೆ. ಈ ಕೆಲಸ ಬಹಳ ಖುಷಿ ಕೊಡುವ ಕಾರಣ, ನನಗೆ ಸಮಯ ಮುಖ್ಯವಾಗುವುದಿಲ್ಲ” ಎಂದು ಯೆಲ್ಲಾ ಮಾತು.
ಪ್ರತೀ ಗಂಟೆಗೆ ಸುಮಾರು 15 ರಿಂದ 20 ಯುರೋ ಅರ್ಥಾತ್ ಭಾರತೀಯ ಕರೆನ್ಸಿಯಲ್ಲಿ ಸುಮಾರು ₹ 1500 ರಿಂದ ₹ 2000 ದವರೆಗೆ ಸಂಭಾವನೆ ಪಡೆಯುತ್ತಾರೆ.
ಯೆಲ್ಲಾ ಮೆಕ್ ಮಾಹನ್ ಗೆ ವಾರ್ಡ್ ರೋಬ್ ಕೆಲಸಕ್ಕೆ ಪ್ರೇರಣೆ ನೀಡಿದ್ದು ಕುಟುಂಬ ಹಾಗೂ ಸ್ನೇಹಿತರಂತೆ. ಪ್ರಸ್ತುತ ಯೆಲ್ಲಾ ಬಳಿ 20 ಖಾಯಂ ಗ್ರಾಹಕರಿದ್ದು, ಅವರ ಮನೆಗೆ ಪ್ರತಿ 2 ವಾರಕ್ಕೊಮ್ಮೆ ಹೋಗಿ ವಾರ್ಡ್ ರೋಬ್ ಅಚ್ಚುಕಟ್ಟಾಗಿ ಜೋಡಿಸುತ್ತಾರೆ.
ಈ ಕೆಲಸ ದುಡ್ಡಿನ ಜತೆಗೆ ತಮಗೆ ಸಮಾಧಾನ ನೀಡುತ್ತದೆ ಎಂದು ಯೆಲ್ಲಾ ಹೇಳುತ್ತಾರೆ.