ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ಬದಲಾವಣೆಗಳನ್ನು ತಂದ ರಾಜ್ಯ ಸರ್ಕಾರ|ಸರ್ಕಾರಿ ಶಾಲೆಗಳಲ್ಲಿನ 6-8 ನೇ ತರಗತಿ ಶಿಕ್ಷಕರಾಗಲು ಪದವಿ ಕಡ್ಡಾಯ
ಬೆಂಗಳೂರು :ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ಬದಲಾವಣೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದ್ದು,ರಾಜ್ಯ ಸರ್ಕಾರಿ ಶಾಲೆಗಳಲ್ಲಿನ 6 ರಿಂದ 8 ನೇ ತರಗತಿ ಶಿಕ್ಷಕ ಹುದ್ದೆಗಳಿಗೆ ಪದವಿ ಕಡ್ಡಾಯಗೊಳಿಸಲಾಗಿದೆ.
ಸರ್ಕಾರಿ ಶಾಲೆಗಳಲ್ಲಿನ 6-8 ನೇ ತರಗತಿ ಶಿಕ್ಷಕರಾಗಲು ಇನ್ಮುಂದೆ ಪದವಿಯಲ್ಲಿ ಕಡ್ಡಾಯವಾಗಿ ಸೇ. 50 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಯಾವುದೇ ಭಾಷಾ ವಿಷಯವನ್ನು ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಅಭ್ಯಾಸ ಮಾಡಿರಬೇಕು. ಜೊತೆಗೆ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ,ಭೂಗೋಳ ಶಾಸ್ತ್ರ ಈ ಯಾವುದಾದರೂ ಒಂದು ವಿಷಯವನ್ನು ಮತ್ತೊಂದು ಐಚ್ಛಿಕ ವಿಷಯವಾಗಿ ಅಭ್ಯಾಸ ಮಾಡಬೇಕು.
ಅಲ್ಲದೆ ಸರ್ಕಾರಿ ಶಾಲೆಗಳಲ್ಲಿನ 6-8 ನೇ ತರಗತಿ ಶಿಕ್ಷಕ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ಫಲಿತಾಂಶದ ಶೇ.50 ರಷ್ಟು ಅಂಕ, ಅರ್ಜಿ ಸಲ್ಲಿಸಲು ಅರ್ಹತೆಗಾಗಿ ಪ್ರತಿ ವರ್ಷ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷಾ (TET) ಫಲಿತಾಂಶದ ಶೇ. 20 ರಷ್ಟು ಅಂಕ, ಪದವಿಯ ಶೇ. 20 ರಷ್ಟು ಮತ್ತು ಬಿ.ಇಡಿ. ಡಿಎಡ್ ಸೇರಿದಂತೆ ಅರ್ಹ ಶಿಕ್ಷಕರ ಶಿಕ್ಷಣದ ಶೇ. 10 ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ನೇಮಕಗೊಂಡವರಿಗೆ 14,550 ರಿಂದ 26,700 ರೂ.ವರೆಗೆ ಮೂಲ ವೇತನ ಶ್ರೇಣಿ ನಿಗದಿಪಡಿಸಲಾಗಿದೆ ಎಂದು ಕರಡು ನಿಯಮಾವಳಿಯಲ್ಲಿ ತಿಳಿಸಲಾಗಿದೆ.