ಬಿಸಿಲಿನಲ್ಲಿ ಪಾಠ ಕೇಳುವ ಮಣಿಕ್ಕರ ಶಾಲಾ ಮಕ್ಕಳು : ಹೊಸ ಕೊಠಡಿ ನಿರ್ಮಿಸಲು ಮುಂದಾದ ಸದಾನಂದ ಗೌಡರ ‘ಸದಾಸ್ಮಿತ ಪ್ರತಿಷ್ಠಾನ
ಪುತ್ತೂರು: ಮಣಿಕ್ಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಾದುರಸ್ತಿಯಲ್ಲಿರುವ ಹಿನ್ನೆಲೆಯಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪೋಷಿತ ‘ಸದಾಸ್ಥಿತ’ ಪ್ರತಿಷ್ಠಾನ ಹೊಸ ಕೊಠಡಿ ನಿರ್ಮಿಸಲು ಮುಂದಾಗಿದೆ.
ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಮಣಿಕ್ಕರ ಶಾಲೆಯ ದುಸ್ಥಿತಿ ಬಗ್ಗೆ ಮಾಹಿತಿ ಪಡೆದು ಕೇಂದ್ರದ ಮಾಜಿ ಸಚಿವರಾದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು 4ರಿಂದ 5 ಲಕ್ಷ ರೂ ವೆಚ್ಚದ ಕೊಠಡಿಯನ್ನು ಸದಾಸ್ಮಿತ ಪ್ರತಿಷ್ಠಾನದ ಮೂಲಕ ನಿರ್ಮಿಸಲು ಉದ್ದೇಶಿಸಲಾಗಿದೆ.
ಈ ಶಾಲೆ ಗ್ರಾಮೀಣ ಭಾಗದಲ್ಲಿದ್ದು, 88ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಹುತೇಕ ಮಂದಿ ಬಡ ಕೂಲಿ ಕಾರ್ಮಿಕರ ಮಕ್ಕಳು ಶಾಲೆಯಲ್ಲಿದ್ದಾರೆ. ಈ ಶಾಲೆಯಲ್ಲಿ ಸದ್ಯ ಶಿಕ್ಷಕರ ಕೊರತೆಯಿಲ್ಲ, ಆದರೆ ತರಗತಿ ಕೋಣೆಗಳು ಬಿರುಕು ಬಿಟ್ಟಿವೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಛಾವಣಿ, ಗೋಡೆ ಬಿದ್ದರೆ ಅಚ್ಚರಿಯಿಲ್ಲ. ಶಾಲೆಯಲ್ಲಿರುವ ನಲಿ ಕಲಿ ಕೊಠಡಿ ಬಿಟ್ಟರೆ ಉಳಿದ ಎಲ್ಲಾ ಕೊಠಡಿಗಳನ್ನು ಇದೇ ಅವಸ್ಥೆ. ಹೀಗಾಗಿ 1ರಿಂದ 7ನೇ ತರಗತಿಯ ಮಕ್ಕಳು ಶಾಲಾ ರಂಗ ಮಂಟಪದ ಒಗಲಿಯಲ್ಲಿ ಬಿಸಿಲಿನಲ್ಲಿ ಒಣಗುತ್ತ ಪಾಠ ಕೇಳುವ ಸ್ಥಿತಿಯಲ್ಲಿದ್ದಾರೆ. ಈ ಸಮಸ್ಯೆ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.
ಶಾಲೆಯ ಕಟ್ಟಡದ ದುಸ್ಥಿತಿಯ ಬಗ್ಗೆ ಅಶೋಕ್ ಕುಮಾರ್ ರೈಯವರು ಸದಾನಂದ ಗೌಡರವರ ಗಮನಕ್ಕೆ ತಂದಿದ್ದರು. ಈ ನಿಟ್ಟಿನಲ್ಲಿ ಹೊಸ ಕೊಠಡಿಯೊಂದನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಮುಂದಿನ ಹತ್ತು ದಿನದಲ್ಲಿ ಈ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ