ಕಳವು ಆರೋಪಿಯನ್ನು ಬೆನ್ನಟ್ಟಿ ಹಿಡಿದ ಪ್ರಕರಣ; ವೀಡಿಯೋ ಮಾಡಿದ ಪತ್ರಕರ್ತ ಪೃಥ್ವಿರಾಜ್‌ಗೆ ಅಭಿನಂದನೆ
ಮಂಗಳೂರು: ಇತ್ತೀಚೆಗೆ ನಗರದಲ್ಲಿ ಹಾಡುಹಗಲಲ್ಲೇ ಮೊಬೈಲ್ ಫೋನ್ ಕದ್ದ ಪ್ರಕರಣದ ಆರೋಪಿಯನ್ನು ಬೆನ್ನಟ್ಟಿ ಹಿಡಿದ ಪೊಲೀಸ್ ಅಧಿಕಾರಿಯೊಬ್ಬರ ಕರ್ತವ್ಯ ಪ್ರಜ್ಞೆಯ ಕುರಿತಂತೆ ವೈರಲ್ ಆಗಿರುವ ವೀಡಿಯೋ ಮಾಡಿರುವ ಟವಿ 9 ವರದಿಗಾರ ಮತ್ತು ಪತ್ರಕರ್ತರ ಸಂಘದ ಸದಸ್ಯ ಪೃಥ್ವಿರಾಜ್ ಬೊಮ್ಮನಹಳ್ಳಿ ಅವರನ್ನು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.
ಮಂಗಳೂರು ಪ್ರೆಸ್ ಕ್ಲಬ್ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಎಚ್ ಜಿ ಅವರು ಅಭಿನಂದನೆಯನ್ನು ನೆರವೇರಿಸಿದರು.
ಹಲವಾರು ಜಿಲ್ಲೆಗಳಲ್ಲಿ ಕೆಲಸ ಮಾಡಿರುವ ತಾನು ಮಂಗಳೂರಿನ ಪತ್ರಕರ್ತರ ಕ್ರಿಯಾಶೀಲತೆ, ಚುರುಕುತನವನ್ನು ಎಲ್ಲೂ ಕಂಡಿಲ್ಲ ಎಂದು ವಾರ್ತಾಧಿಕಾರಿ ರವಿರಾಜ್ ಶ್ಲಾಘಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪೃಥ್ವಿರಾಜ್, ಪ್ರತಿಯೊಬ್ಬ ಪತ್ರಕರ್ತ ಪ್ರತಿನಿತ್ಯ ಇಂತಹ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾನೆ. ತನ್ನ ಈ ಕಾರ್ಯ ಗುರುತಿಸಲ್ಪಟ್ಟಿರುವುದು ಸಂತಸ ತಂದಿದೆ ಎಂದರು. ದ.ಕ. ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಕಾರ್ಯಕ್ರಮ ನಿರೂಪಿಸಿದರು. ಜಿತೇಂದ್ರ ಕುಂದೇಶ್ವರ ವಂದಿಸಿದರು.