ಮಂಗಗಳ ಕೈಯಲ್ಲಿ ‘ಸ್ಮಾರ್ಟ್ ಫೋನ್ ‘| ವ್ಯಕ್ತಿಯೊಬ್ಬ ಕ್ಯಾಮರಾದಲ್ಲಿ ಸೆರೆಹಿಡಿದ ತಮ್ಮದೇ ವಿಡಿಯೋವನ್ನು ದಿಟ್ಟಿಸಿ ನೋಡುತ್ತಿರುವ ಕೋತಿಗಳ ವಿಡಿಯೋ ವೈರಲ್
ಮಂಗನಿಂದಲೇ ಮಾನವ ಎನ್ನುವ ಮಾತಿದೆ. ಕೋತಿ ಮನುಷ್ಯರಿಗೆ ತುಂಬಾ ಹತ್ತಿರವಾಗಿರುವ ಜೀವಿ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಹಲವು ಸಂದರ್ಭಗಳಲ್ಲಿ ಮನುಷ್ಯನ ವರ್ತನೆಯನ್ನು ಕೋತಿಗಳಿಗೆ ಹೋಲಿಸಲಾಗುತ್ತದೆ.
ಕೋತಿಗಳು ಎಂದೊಡನೆ ನೆನಪಾಗುವುದೇ ಅವುಗಳ ಚೇಷ್ಟೆ. ಒಂದು ಕ್ಷಣವೂ ಸುಮ್ಮನೆ ಕೂರದ ಅಥವಾ ಕುಳಿತಲ್ಲಿಯೇ ಏನಾದರೂ ಚೇಷ್ಟೆಯನ್ನು ಹುಡುಕುವ ಮಂಗಗಳ ತಮಾಷೆಯ ಚೇಷ್ಟೆಗಳನ್ನು ನೋಡಿದರೆ ಯಾರು ತಾನೇ ನಗದೇ ಇರಲು ಸಾಧ್ಯ?? ಈಗ ಅಂತಹದ್ದೇ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಯಾವುದಾದರೂ ವಸ್ತುವನ್ನು ತುಂಬಾ ಉತ್ಸಾಹಭರಿತವಾಗಿ ನೋಡುವಾಗ ಅಥವಾ ಆ ವಸ್ತುವನ್ನು ಎಂದೂ ಕಂಡೇ ಇಲ್ಲ ಎಂಬಂದೆ ಆಡುವುದನ್ನು ನೋಡಿದಾಗ, ‘ಮಂಗನ ಕೈಗೆ ಮಾಣಿಕ್ಯ’ ಕೊಟ್ಟ ಹಾಗೆ ಆಗಿದೆ ಎಂದು ಸಾಮಾನ್ಯವಾಗಿ ಮನೆಯಲ್ಲಿ ದೊಡ್ಡವರು ಹೇಳುವ ಮಾತನ್ನು ನಾವೆಲ್ಲರೂ ಒಂದಲ್ಲಾ ಒಂದು ಸಮಯದಲ್ಲಿ ಕೇಳಿಯೇ ಇರುತ್ತೇವೆ. ಆದರೆ ನಿಜವಾದ ಮಂಗಗಳ ಕೈಗೆ ಸ್ಮಾರ್ಟ್‌ಫೋನ್ ಕೊಟ್ಟಾಗ ಹೇಗಿರುತ್ತೆ…!
ವಾಸ್ತವವಾಗಿ, ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ತನ್ನ ಕ್ಯಾಮೆರಾದಲ್ಲಿ ಕೋತಿಗಳನ್ನು ಸೆರೆಹಿಡಿದಿರುವುದನ್ನು ಕಾಣಬಹುದು. ವೀಡಿಯೊ ಮಾಡಿ ಬಳಿಕ ಅದೇ ವಿಡಿಯೋವನ್ನು ಮಂಗಗಳಿಗೆ ತೋರಿಸಿದ್ದಾರೆ. ಹೌದು, ಈ ವೈರಲ್ ವೀಡಿಯೋದಲ್ಲಿ ಯಾರೋ ಒಬ್ಬರು ಒಂದು ಸಣ್ಣ ಮಂಗಗಳ ಹಿಂಡಿಗೆ ಸ್ಮಾರ್ಟ್‌ಫೋನ್‌ನಲ್ಲಿ ವೀಡಿಯೋ ಆನ್ ಮಾಡಿ ಕೊಟ್ಟಿದ್ದಾರೆ. ಮೊದಲಿಗೆ ಈ ವೀಡಿಯೋ ಫ್ರೇಮಿನಲ್ಲಿ ಮೂರು ಮಂಗಗಳು ವೀಡಿಯೋ ನೋಡುವುದನ್ನು ಕಾಣಬಹುದು. ಅವುಗಳಲ್ಲಿ ಒಂದು ಮಂಗ ವೀಡಿಯೋ ಕಂಡು ಏನೋ ಅಚ್ಚರಿಕಂಡಂತೆ ಹುಬ್ಬೇರಿಸಿತು. ಫೋನ್ ಹಿಡಿದಿದ್ದ ವ್ಯಕ್ತಿ ಫೋನ್ ಅನ್ನು ಸ್ವಲ್ಪ ತಿರುಗಿಸುತ್ತಿದ್ದಂತೆ ಪಕ್ಕದಲ್ಲೇ ಇದ್ದ ಇನ್ನೊಂದು ಮಂಗ ಸ್ಮಾರ್ಟ್‌ಫೋನ್ ಅನ್ನು ತನ್ನೆಡೆ ಕಸಿದು ವೀಡಿಯೋಗೆ ಚುಂಬಿಸಲು ಪ್ರಯತ್ನಿಸಿತು. ಅಷ್ಟರಲ್ಲಿ ಮತ್ತೊಂದು ದೊಡ್ಡ ಮಂಗ ಸ್ಮಾರ್ಟ್‌ಫೋನ್‌ನಲ್ಲಿ ವೀಡಿಯೋದಲ್ಲಿದ್ದ ಮಂಗಗಳ ಹಿಂಡನ್ನು ಸ್ಪರ್ಶಿಸಲು ಯತ್ನಿಸುತ್ತದೆ. ಬಳಿಕ ಆ ಮೂರು ಮಂಗಗಳು ವೀಡಿಯೋ ವೀಕ್ಷಿಸುತ್ತಿದ್ದವು. ಅಷ್ಟರಲ್ಲಿ ಹಿಂಬದಿಯಿಂದ ಒಂದು ಪುಟಾಣಿ ಕೋತಿ ಮರಿ ಗಾಬರಿಗೊಂಡಂತೆ ದೊಡ್ಡ ಕೋತಿಯ ಬಳಿ ಬರುತ್ತದೆ. ತನ್ನದೇ ವೀಡಿಯೋ ನೋಡಿ ಬೆಚ್ಚಿಬಿದ್ದ ಫ್ರೇಮಿನಲ್ಲಿದ್ದ ಚಿಕ್ಕ ಕೋತಿಯ ಪ್ರತಿಕ್ರಿಯೆ ಮಾತ್ರ ನೋಡಲೇಬೇಕು.
ಕೆಲವೇ ಸೆಕೆಂಡುಗಳ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು ಇದುವರೆಗೂ ಸಾವಿರಾರು ಮಂದಿ ವೀಡಿಯೋ ವೀಕ್ಷಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ನೆಟ್ಟಿಗರು ಇದನ್ನು ಇಷ್ಟಪಟ್ಟಿದ್ದಾರೆ. ವೀಡಿಯೋ ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ತಿಳಿದಿಲ್ಲ. ಆದರೆ ಇದನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಹೆಲಿಕಾಪ್ಟರ್_ಯಾತ್ರಾ ಹೆಸರಿನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ.