ಜೀವ ಉಳಿಸಬೇಕಾದ ವ್ಯಾಕ್ಸಿನ್ ಇಲ್ಲೊಬ್ಬರ ಪಾಲಿಗೆ ಕೈಯನ್ನೇ ಕಳೆದುಕೊಳ್ಳುವ ಸ್ಥಿತಿಗೆ ದೂಡಿದೆ!
ಕೊಪ್ಪಳ : ಕೊರೋನದಿಂದ ರಕ್ಷಿಸಿಕೊಳ್ಳಲೆಂದು ಕೊಡುತ್ತಿರುವ ವ್ಯಾಕ್ಸಿನ್ ಇಲ್ಲೊಬ್ಬರ ಕೈಯನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಈತನ ಈ ಸ್ಥಿತಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯ ಎಡವಟ್ಟೇ ಕಾರಣವಾಗಿದ್ದು,ಈ ಘಟನೆ ಕೊಪ್ಪಳ ತಾಲೂಕಿನ ಬಹದ್ದೂರ ಬಂಡಿ ಬಳಿ ನಡೆದಿದೆ.
ಕೊಪ್ಪಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸರಿಯಾಗಿ ಕೈಗೆ ಲಸಿಕೆ ಹಾಕದ ಹಿನ್ನೆಲೆ, ಬಹದ್ದೂರಬಂಡಿ ನಿವಾಸಿ ಹನುಮಂತಪ್ಪ ತಳವಾರ್ ಕೈ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.
ಕಳೆದ ಅಕ್ಟೋಬರ್ 4 ರಂದು ಬಹದ್ದೂರಬಂಡಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಕೊವಿಡ್ ಲಸಿಕೆ ಹಾಕಿಸಿಕೊಂಡಿದ್ದ ಹನುಮಂತಪ್ಪನ ಕೈಗೆ ಗಂಭೀರ ಗಾಯವಾಗಿದೆ.ಸ್ಟಾಫ್ ನರ್ಸ್ ಪ್ರಭಾವತಿ ಎನ್ನುವರು ಹನುಮಂತಪ್ಪನ ಕೈಗೆ ಲಸಿಕೆ ಹಾಕಿದ್ದರು. ಪ್ರಭಾವತಿ ಹನುಮಂತಪ್ಪನ ಕೈಗೆ ಸರಿಯಾಗಿ ಲಸಿಕೆ ಹಾಕದ ಹಿನ್ನಲೆಯಲ್ಲಿ, ವ್ಯಾಕ್ಸಿನೇಷನ್ ಹಾಕಿಸಿಕೊಂಡ ನಾಲ್ಕು ದಿನದಲ್ಲಿ ಹನುಮಂತಪ್ಪನ ಕೈಯಲ್ಲಿ ಬಾವು ಕಾಣಿಸಿಕೊಂಡಿದೆ. ಬಳಿಕ ಹನುಮಂತಪ್ಪನ ಕೈಗೆ ಗಂಭೀರ ಗಾಯವಾಗಿದೆ. ಕೈ ಗಾಯದ ಕುರಿತು ಹನುಮಂತಪ್ಪ ಆರೋಗ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ.
ಈ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾದ ಹನುಮಂತಪ್ಪ ಅಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಆರೋಗ್ಯ ಇಲಾಖೆಯವರ ಎಡವಟ್ಟಿನಿಂದ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಹನುಮಂತಪ್ಪ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.