ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅಸ್ತು | ಐವರು ಸಚಿವರಿಗೆ ಕೊಕ್ ?
ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಐದಾರು ಮಂದಿ ಸಚಿವರಿಗೆ ಕೊಕ್ ನೀಡುವ ಸಾಧ್ಯತೆ ಇದೆ.
ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿರುವ ಬಿಜೆಪಿ ಹೈಕಮಾಂಡ್ ಇದರ ನಡುವೆಯೇ ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.
ಪಂಚ ರಾಜ್ಯಗಳ ಚುನಾವಣೆ ಮುಗಿದ ಕೂಡಲೇ ಮಾರ್ಚ್ 15 ರ ವೇಳೆಗೆ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ.
ಮುಂದಿನ ವಿಧಾನಸಭೆ ಚುನಾವಣೆ, ಬಿಬಿಎಂಪಿ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಬಲಪಡಿಸುವ ಉದ್ದೇಶದೊಂದಿಗೆ ಸಚಿವ ಸಂಪುಟ ಪುನಾರಚನೆ ಮಾಡಲಾಗುತ್ತದೆ.
ಸಂಪುಟ ಪುನಾರಚನೆ ವೇಳೆ ಐದಾರು ಮಂದಿ ಸಚಿವರಿಗೆ ಕೊಕ್ ನೀಡುವ ಸಾಧ್ಯತೆಯಿದೆ. ನಾಲ್ಕೈದು ಬಾರಿ ಶಾಸಕರಾಗಿ ಸಚಿವ ಸ್ಥಾನ ಸಿಗದವರಿಗೆ ಆದ್ಯತೆ ನೀಡಲಾಗುವುದು. ಇವರೊಂದಿಗೆ ಹೊಸ ಮುಖಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸಂಪುಟದಲ್ಲಿ 4 ಸ್ಥಾನಗಳು ಖಾಲಿ ಉಳಿದಿದ್ದು, ಇದರ ಜೊತೆಗೆ ಐದಾರು ಮಂದಿಗೆ ಕೊಕ್ ನೀಡುವುದರಿಂದ 10 ಸ್ಥಾನಗಳು ಖಾಲಿಯಾಗಲಿವೆ. ಈ ಸ್ಥಾನಗಳಿಗೆ ನೇಮಕ ಮಾಡಿಕೊಂಡು ಆಡಳಿತಕ್ಕೆ ಹೊಸ ಸ್ಪರ್ಶ ನೀಡಲಾಗುವುದು.
ಹಿರಿಯ ಸಚಿವರಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಲಾಗುವುದು. ಹೊಸದಾಗಿ ಸಚಿವರಾಗುವವರಿಗೆ ಒಂದು ವರ್ಷ ಮಾತ್ರ ಅವಕಾಶ ಇರುವುದರಿಂದ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಮುಂದಿನ ಚುನಾವಣೆಗೆ ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆನ್ನಲಾಗಿದೆ.