ಇನ್ನೊಬ್ಬರ ಬದಲಿಗೆ ಕ್ಯೂ ನಿಲ್ಲುವುದೇ ಈತ ಹುಡುಕಿಕೊಂಡ ಹೊಸ ಸೆಲ್ಫ್ ಎಂಪ್ಲಾಯ್ ಮೆಂಟ್ | ಶ್ರೀಮಂತರ ಬದಲಿಗೆ ಕ್ಯೂ ನಿಂತು ಈತ ದಿನಕ್ಕೆ ಗಳಿಸೋದು 16000 ರೂಪಾಯಿ !
ಕ್ಯೂ ನಲ್ಲಿ ತಾಸುಗಟ್ಟಲೇ ನಿಲ್ಲುವುದೆಂದರೆ ಯಾರಿಗೆ ತಾನೇ ಕಿರಿಕಿರಿಯಾಗಲ್ಲ ? ಕಾಯುವುದೆಂದರೆ ಕಿರಿಕಿರಿಯ ಸಂಗತಿನೇ ಸರಿ. ಈಗಿನ ಆನ್ಲೈನ್ ಯುಗದಲ್ಲಿ ಕೆಲವೊಂದಕ್ಕೆ ನಾವು ಕ್ಯೂ ನಲ್ಲೇ ನಿಂತುಕೊಂಡು ಕೆಲಸ ನಿರ್ವಹಿಸಬೇಕು.
ಉದಾಹರಣೆಗೆ ಶಾಪಿಂಗ್ ಮಾಲ್ ಗಳ ಬಿಲ್ ಕೌಂಟರ್ ಗಳು, ಬಾರ್ ಗಳಲ್ಲಿ, ವಿಮಾನ ನಿಲ್ದಾಣ, ರೈಲು ನಿಲ್ದಾಣ ಇಲ್ಲೆಲ್ಲಾ ತಾಸುಗಟ್ಟಲೇ ಕಾಯುವುದೇ ಜನರಿಗೆ ಒಂದು ಸಹಿಸಲಸಾಧ್ಯವಾದ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಅದರಲ್ಲೂ ವೃದ್ಧರೇನಾದರೂ ಬಂದರೆಂದರೆ ಅಷ್ಟೇ.
ಆದರೆ ಲಂಡನ್ ನಲ್ಲಿ ವ್ಯಕ್ತಿಯೊಬ್ಬ ಇದೇ ಕಿರಿಕಿರಿಯನ್ನು ತಪ್ಪಿಸಲು ಹಾಗೂ ಅದನ್ನೇ ತನ್ನ ದುಡಿಮೆಯ ದಾರಿಯನ್ನಾಗಿ ಬಳಸಿಕೊಂಡದ್ದು ಒಂದು ಸಾಹಸವೇ ಸರಿ. ಈತ ಬೇರೆಯವರ ಪರವಾಗಿ ಕ್ಯೂ ನಲ್ಲಿ ನಿಲ್ಲುವ ಮೂಲಕ ನಿತ್ಯ ಸುಮಾರು 16,000 ರೂ. ಸಂಪಾದನೆ ಮಾಡುತ್ತಿದ್ದಾನೆ. ತಾನೆ ಹೊಸದೊಂದು ಸೆಲ್ಫ್ ಎಂಪ್ಲಾಯ್ಮೆಂಟ್ ಸೃಷ್ಟಿಸಿಕೊಂಡಿದ್ದಾನೆ. ನಂಬಲಸಾಧ್ಯ ಅಲ್ಲವೇ ?
ಬೇರೆಯವರ ಕಿರಿಕಿರಿಯನ್ನು ತನ್ನ ಆದಾಯದ ಮೂಲವನ್ನಾಗಿಸಿದ್ದಾನೆ. ಫ್ರೆಡ್ಡಿ ಬೆಕಿಟ್ ಎಂಬ 31 ವರ್ಷದ ವ್ಯಕ್ತಿಯು ಲಂಡನ್ ನಲ್ಲಿ ಬೇರೆಯವರ ಪರವಾಗಿ ಕ್ಯೂ ನಿಲ್ಲುತ್ತಾನೆ. ಸರತಿ ಸಾಲಿನಲ್ಲಿ ನಿಲ್ಲಬೇಕಾದವರು ಈತನನ್ನು ಸಂಪರ್ಕಿಸಿದರೆ ಸಾಕು, ಆತ ತಾಸುಗಟ್ಟಲೇ ಕ್ಯೂನಲ್ಲಿ ನಿಂತು ಬೇರೆಯವರ ಕೆಲಸ ಮಾಡಿಕೊಡುತ್ತಾನೆ. ಇದಕ್ಕಾಗಿ ಆತ ಗಂಟೆಗೆ ಸುಮಾರು 1400 ರೂ ಅಂದರೆ 20 ಡಾಲರ್ ಶುಲ್ಕ ಪಡೆಯುತ್ತಾನೆ. ನಿತ್ಯ ಇದರಿಂದ 16 ಸಾವಿರದವರೆಗೆ ಕಮಾಯಿ ಮಾಡುತ್ತಿದ್ದಾನೆ.
ನಿತ್ಯ 8 ಗಂಟೆ ಕ್ಯೂ ನಲ್ಲಿ ನಿಲ್ಲುತ್ತಿರುವುದರಿಂದ ಉತ್ತಮ ಆದಾಯವೂ ಲಭಿಸುತ್ತಿದೆ. ವಿ ಆಂಡ್ ಎ ಒಡೆತನದ ಕ್ರಿಶ್ಚಿಯನ್ ಡಿಯೋರ್ ನಲ್ಲಿ ಸರತಿ ಸಾಲಿನಲ್ಲಿ ಕಾಯಬೇಕಾದವರು, 60 ವರ್ಷ ದಾಟಿದವರಿಗೆ ಫ್ರೆಡ್ಡಿ ಬಿಕೆಟ್ ಸಹಾಯ ಮಾಡುತ್ತಾನೆ. ಮ್ಯೂಸಿಯಂನಲ್ಲಿ ಟಿಕೆಟ್ ಖರೀದಿ ಮಾಡಲು, ಒಳಗೆ ಪ್ರವೇಶ ಮಾಡಲು ಅವರ ಪಾಳಿ ಬರುವ ತನಕ ಈತನೇ ನಿಲ್ಲುತ್ತಾನೆ. ಕೆಲವೊಮ್ಮೆ ಹಿರಿಯರು ಮಾತ್ರವಲ್ಲ ಕಿರಿಯರು ಕೂಡಾ ಇವರಿಂದ ಸಹಾಯ ಪಡೆಯುತ್ತಾರೆ.