ನೆಲ್ಯಾಡಿ : ಪಿಗ್ಮಿ ಸಂಗ್ರಾಹಕ ನಾಪತ್ತೆ | ಹಲವರಿಗೆ ಲಕ್ಷಾಂತರ ಪಂಗನಾಮ
ನೆಲ್ಯಾಡಿ: ಸಹಕಾರ ಸಂಘವೊಂದರ ನೆಲ್ಯಾಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದ ಕೌಕ್ರಾಡಿ ಗ್ರಾಮದ ದೋಂತಿಲ ನಿವಾಸಿ ಪ್ರವೀಣ್ ಕುಮಾರ್(26ವ.)ಎಂಬವರು ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದಾರೆ.
ನೆಲ್ಯಾಡಿ ಅಸುಪಾಸಿನಲ್ಲಿ ಹಲವು ಮಂದಿಯಿಂದ ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದು ಸಾಲ ಹಿಂತಿರುಗಿಸಲು ಸಾಧ್ಯವಾಗದೆ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಮಧ್ಯೆ ಜ.18ರಂದು ಮಧ್ಯಾಹ್ನದ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ವಾಟ್ಸಪ್ ಕರೆ ಮಾಡಿ , ನಾನು ಬಿಹಾರದಲ್ಲಿದ್ದು ಛೋಟಾ ರಾಜನ್ ಗ್ಯಾಂಗ್‌ನವರ ಜಾಲದೊಳಗೆ ಸಿಲುಕಿಕೊಂಡಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ನೆಲ್ಯಾಡಿಯಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕೆಲಸ ಮಾಡಿಕೊಂಡಿದ್ದ ಪ್ರವೀಣ್ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಇಲ್ಲಿನ ಅಡಿಕೆ ವ್ಯಾಪಾರಿಗಳು, ನೆಲ್ಯಾಡಿಯ ಪ್ರತಿಷ್ಠಿತ ಉದ್ಯಮಿಗಳು ಸೇರಿದಂತೆ ಹಲವು ಮಂದಿಯ ವಿಶ್ವಾಸಗಳಿಸಿಕೊಂಡಿದ್ದ ಅವರು ಕೆಲವರಿಂದ ಲಕ್ಷಕ್ಕೂ ಮಿಕ್ಕಿ ಕೈ ಸಾಲ ಪಡೆದುಕೊಂಡು ಹಿಂತಿರುಗಿಸಲಾಗದೆ ಈಗ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಚಿಟ್‌ಫಂಡ್‌ನಲ್ಲೂ ಇವರಿಂದ ಕೆಲವರಿಗೆ ಮೋಸ ಆಗಿದೆ ಎಂಬ ದೂರುಗಳು ಕೇಳಿಬಂದಿವೆ. ಇವರು ಹಲವು ಮಂದಿಯಿಂದ ರೂ.55ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎಂದು ಹೇಳಲಾಗಿದೆ. ಜ.3ರಿಂದ ನಾಪತ್ತೆಯಾಗಿದ್ದು ಮೊಬೈಲ್ ಈಗ ಸ್ವಿಚ್ಡ್ ಆಫ್ ಆಗಿದೆ . ಪ್ರವೀಣ್ ನೆಲ್ಯಾಡಿ ವರ್ತಕ ಸಂಘದ ಕಾರ್ಯದರ್ಶಿಯೂ ಆಗಿದ್ದರು. ಮನೆಯವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.