ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ,ಚಪ್ಪರ ಮುಹೂರ್ತ, ಆಮಂತ್ರಣ ಬಿಡುಗಡೆ
ಸವಣೂರು: ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನವು ಸಂಪೂರ್ಣ ಜೀರ್ಣೋದ್ಧಾರಗೊಂಡು ನಿಲೇಶ್ವರ ಉಚ್ಚಿಲತ್ತಾಯ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶ ಹಾಗೂ ಉತ್ಸವವು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.1 ಹಾಗೂ ರಿಂದ 7 ತನಕ ವಿಜೃಂಭಣೆಯಿಂದ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತವು ಜ.17 ರಂದು ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಶ್ರೀ ಕ್ಷೇತ್ರದ ಪವಿತ್ರಪಾಣಿ ಬಾಲಕೃಷ್ಣ ಮೊಡಂಬಡಿತ್ತಾಯ ಪೂಜಾ ವಿಧಿ ವಿಧಾನ ನೆರವೇರಿಸಿ ತೆಂಗಿನಕಾಯಿ ಒಡೆಯುವ ಮೂಲಕ ಚಪ್ಪರ ಮುಹೂರ್ತ ನೆರವೇರಿಸಿದರು. ಅರ್ಚಕ ನಾಗೇಶ್ ಕಣ್ಣಾರಾಯ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು, ಶಾಸಕ ಸಂಜೀವ ಮಠಂದೂರು ಶ್ರೀಕ್ಷೇತ್ರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿ, ಕ್ಷೇತ್ರದ ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸುವುದು ಈ ಭಾಗದ ಭಕ್ತರ ಕೈಯಲ್ಲಿದೆ. ಬ್ರಹ್ಮಕಲಶೋತ್ಸವದಂತಹ ಸೇವಾ ಕಾರ್ಯ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂದರು.
ಸರಕಾರದಿಂದ ಸಿಗಬಹುದಾದ ಅನುದಾನವನ್ನು ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಶೀಘ್ರದಲ್ಲಿ ಬಿಡುಗಡೆಗೊಳಿಸುವುದಾಗಿ ಈ ಸಂದರ್ಭದಲ್ಲಿ ಅವರು ಭರವಸೆ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಎಲ್ಲಾ ಭಕ್ತಾಧಿಗಳು ಸೇರಿಕೊಂಡು ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗೋಣ ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಾಗೇಶ್ ರಾವ್ ಎಲಿಯ, ಪ್ರಧಾನ ಕಾರ್ಯದರ್ಶಿ ರವಿನಾರಾಯಣ ಭಟ್ ಎಲಿಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕರುಣಾಕರ ಗೌಡ ಎಲಿಯ, ಕ್ಷೇತ್ರದ ಪವಿತ್ರಪಾಣಿ ಬಾಲಕೃಷ್ಣ ಮೊಡಂಬಡಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ, ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮಾದೋಡಿ ಭಾಸ್ಕರ ರೈ ನಂಜೆ, ದಾನಿಗಳಾದ ಅಬುದಾಬಿ ಜಯರಾಮ ರೈ ಮಿತ್ರಂಪಾಡಿ, ರಾಮಯ್ಯ ರೈ ತಿಂಗಳಾಡಿ, ಜೀರ್ಣೋದ್ಧಾರ ಸಮಿತಿ ಸಂಘಟನಾ ಸಮಿತಿ ಸಂಚಾಲಕ ಉಮೇಶ್ ಸುವರ್ಣ ಸೊರಕೆ, ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಪ್ರಸನ್ನ ರೈ ಮಜಲುಗದ್ದೆ ಸೇರಿದಂತೆ ಹಲವು ಮಂದಿ ಭಕ್ತಾಧಿಗಳು ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯ ಅಶೋಕ್ ರೈ ಸೊರಕೆ ಪ್ರಾರ್ಥಿಸಿದರು. ರತ್ನಾಕರ ರೈ ಕಾರ್ಯಕ್ರಮ ನಿರೂಪಿಸಿದರು.