ಕೊರೊನಾ ಪಾಸಿಟಿವ್ ಇದ್ದರೂ ಶಬರಿಮಲೆ ಯಾತ್ರೆ ಕೈಗೊಂಡರು, ಮಾರ್ಗ ಮಧ್ಯದಲ್ಲೇ ತಡೆದು ಪೊಲೀಸರು ವಾಪಸು ಕರೆತಂದರು
ಮಂಡ್ಯ : ಕೊರೊನಾ ಪಾಸಿಟಿವ್ ಬಂದರೂ ಆರೋಗ್ಯ ಇಲಾಖೆಯ ಕಣ್ತಪ್ಪಿಸಿ ಮಂಡ್ಯದಲ್ಲಿ ಕೆಲವರು ಯಾತ್ರೆಗೆ ಹೊರಟಿದ್ದ ಪ್ರಸಂಗ ನಡೆದಿದೆ.
ಕೆ ಆರ್ ಪೇಟೆ ತಾಲೂಕಿನ ಮಂಚೀಬೀಡು ಗ್ರಾಮದಿಂದ ಶಬರಿಮಲೆ ಯಾತ್ರೆಗೆ ಅಯ್ಯಪ್ಪ ಸ್ವಾಮಿ ಭಕ್ತರು ಹೊರಟಿದ್ದರು. ಹೊರಡೋ ಮೊದಲು ಕೊರೊನಾ ಪರೀಕ್ಷೆ ಮಾಡಿಸಿದ್ದು, ವರದಿ ಬರುವವರೆಗೆ ಎಲ್ಲೂ ಹೋಗಬಾರದು ಎಂದು ಆರೋಗ್ಯ ಇಲಾಖೆ ಹೇಳಿದೆ. ಆದರೆ ಕೊರೊನಾ ಟೆಸ್ಟ್ ಮಾಡಿಸಿದ ಮರುದಿನ ಬೆಳ್ಳಂಬೆಳಗ್ಗೆಯೇ 30 ಜನ ಯಾತ್ರೆಗೆ ಹೊರಟಿದ್ದಾರೆ. ಇತ್ತ ವರದಿಯಲ್ಲಿ 15 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.
ಶಬರಿಮಲೆಗೆ ಹೊರಟ 30 ಮಂದಿ ಪೈಕಿ 15 ಮಂದಿಗೆ ಕೊರೊನಾ ಪಾಸಿಟಿವ್ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಕೆ ಆರ್ ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸರ ಸಹಾಯ ಪಡೆದು ಸೋಂಕಿತ ಯಾತ್ರಾರ್ಥಿಗಳ ಪತ್ತೆಗೆ ಬಲೆ ಬೀಸಿತ್ತು. ಗುಂಡ್ಲುಪೇಟೆ ಬೇಗೂರು ಚೆಕ್ ಪೋಸ್ಟ್ ಬಳಿ ಯಾತ್ರಿಗಳನ್ನು ತಡೆದ ಪೊಲೀಸರು ವಾಪಸ್ ಕರೆತಂದರು. ನಿಯಮ ಉಲ್ಲಂಘಿಸಿ ಯಾತ್ರೆ ಕೈಗೊಂಡವರ ವಿರುದ್ಧ ಕೆ ಆರ್ ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.