55 ಬಾರಿ ಸೋತು 56ನೇ ಬಾರಿಗೆ ಹತ್ತನೇ ತರಗತಿ ಪಾಸ್ ಮಾಡಿದ ವ್ಯಕ್ತಿ | ತೇರ್ಗಡೆಯಾಗುವ ಕಳೆದಿತ್ತು ಆತನ ವಯಸ್ಸು 70
ಆತ ಛಲದಂಕ ಮಲ್ಲ, ಎಷ್ಟೇ ಬಾರಿ ಸೋತರೂ ಸೋಲೊಪ್ಪಿ ಕೊಳ್ಳದ ಸರದಾರ. ಅದೇ ಕಾರಣಕ್ಕೆ 55 ಬಾರಿ ಸೋತು ಹೋದರೂ ಆತ ಕುಗ್ಗಲಿಲ್ಲ. ತನ್ನ ಗುರಿ ಮರೆಯಲಿಲ್ಲ. ಕೊನೆಗೆ 56 ನೆಯ ಬಾರಿ ಹತ್ತನೇ ತರಗತಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದಾರೆ. ಅಷ್ಟರಲ್ಲಾಗಲೇ ಆತನಿಗೆ ಆಗಿತ್ತು 70 ಪ್ಲಸ್ ತುಂಬಿದ ವರ್ಷ !
ಕನಸು ನನಸಾಗಿಸಲು ವಯಸ್ಸಿನ ಮಿತಿ ಲೆಕ್ಕಕ್ಕೆ ಬರಲ್ಲ ಎಂಬ ಮಾತೊಂದು ಸತ್ಯವಾಗಿದ್ದು, ಇದಕ್ಕೆ ಪೂರಕವಾದ ಉದಾಹರಣೆ ಎಂಬಂತೆ ಈ 73 ವರ್ಷದ ವ್ಯಕ್ತಿ 56 ನೇ ಬಾರಿಗೆ ಪ್ರಯತ್ನಿಸಿ ಹತ್ತನೇ ತರಗತಿ ತೇರ್ಗಡೆ ಹೊಂದಿದ್ದಾರೆ. ರಾಜಸ್ಥಾನದ ಜಲೋರ್ ನ ಸರ್ದಾರ್ ಗಡ ಗ್ರಾಮದ ಹುಕುಮ್ ದಾಸ್ ಎಂಬವರೇ ಈ ಹಠ ಸಾಧಕ ಮುದುಕ.
ಒಂದರಿಂದ ಒಂಭತ್ತರ ವರೆಗೆ ಉತ್ತೀರ್ಣರಾಗಿದ್ದ ಹುಕುಮ್ ದಾಸ್ ಹತ್ತನೇ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಬಳಿಕ ಎಲ್ಲಾ ಸಪ್ಲಿಮೆಂಟರಿ ಪರೀಕ್ಷೆಗಳಲ್ಲೂ ಅನುತ್ತೀರ್ಣ
ರಾಗುತ್ತಲೇ ಹೋದ. ಯಾಕೋ ತಲೆಗೆ ವಿದ್ಯೆ ಹತ್ತುತ್ತಿರಲಿಲ್ಲ. ಆದ್ರೆ ಚಲ ಬಿಡಲಿಲ್ಲ ಹುಕುಮ್. ನೀರು ಸರಬರಾಜು ಇಲಾಖೆಯಲ್ಲಿ ಡಿ. ದರ್ಜೆಯ ನೌಕರನಾಗಿದ್ದ ಹುಕುಮ್, ನಿರಂತರವಾಗಿ ಪ್ರಯತ್ನ ನಡೆಸುತ್ತಲೇ ಇದ್ದರು. ಆದರೆ ಅಷ್ಟರೊಳಗೆ ಪ್ರಾಯ ಏರಿತ್ತು, ಆತನಿಗೆ ನಿವೃತ್ತಿ ಆಗಿತ್ತು.
ರಿಟೈರ್ಮೆಂಟ್ ಆಗುವ ವೇಳೆಗಾಗಲೇ 48 ಬಾರಿ ಹತ್ತನೇ ತರಗತಿ ಪರೀಕ್ಷೆಗೆ ಪ್ರಯತ್ನಿಸಿ, ಸೋತು, ಒಂದಷ್ಟು ಅನುಭವ ಹೊಂದಿದ್ದರು ಹುಕುಂ.
ನಿವೃತ್ತಿ ಆಯಿತು, ಇನ್ನೇನು ಎಂದು ಆತ ಸೋಲೊಪ್ಪಿಕೊಂಡು ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ಓದು ತಲೆಗೆ ಸರಿಯಾಗಿ ಎರದೆ ಇದ್ದರೂ ಹತ್ತನೆಯ ಕ್ಲಾಸ್ ಪುಸ್ತಕ ಬಿಡಿಸಿ ಓದಿಗೆ ಕೂರುತ್ತಿದ್ದರು ಆತ. ಕೊನೆಗೂ ಹಠ, ಪರಿಶ್ರಮ ಗೆದ್ದಿದೆ. ಸೋಲು ಸೋಲೊಪ್ಪಿಕೊಂಡು, 2019 ನೇ ಬ್ಯಾಚ್ ನಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಆತನ ಜೀವಮಾನದ ಸಾಧನೆ ಆ ಮೂಲಕ ಈಡೇರಿದೆ.
ಆದ್ರೆ ಸಾಧನೆ ಒಂದು ಗೆಲುವಿಗೆ ನಿಲ್ಲಲ್ಲ ಅನ್ನುವುದು ಆ ವಯೋ ವೃದ್ದನಿಗೂ ತಿಳಿದಿದೆ. ಅದಕ್ಕೇ ಇರಬೇಕು, ಆತ ಈಗ ಮತ್ತೆ ಓದು ಮುಂದುವರೆಸಿದ್ದಾರೆ. ಪಿಯುಸಿ ಪರೀಕ್ಷೆಗಾಗಿ ಕಲಾ ವಿಭಾಗಕ್ಕೆ ದಾಖಲಾಗಿದ್ದಾರೆ. ಇನ್ನೊಂದು ವಿಷಯ ಏನೆಂದರೆ ಹುಕುಮ್ ಮೊಮ್ಮಗ ಕೂಡಾ ವಿದ್ಯಾಭ್ಯಾಸ ಪೂರ್ಣಗೊಳಿಸಿ ಬದುಕು ಕಟ್ಟಿಕೊಳ್ಳಲು ಉದ್ಯೋಗ ಮಾಡುತ್ತಿದ್ದರೆ, ಈಗ 77 ವರ್ಷ ನಡೆಯುತ್ತಿರುವ, ಮುದುಕ ಅಂದು ಕರೆಯಲ್ಪಡುವ ಯುವಕರ ಉತ್ಸಾಹದ ವ್ಯಕ್ತಿ ಇನ್ನೂ ಓದಿನ ಕಡೆಗೆ ಗಮನಕೊಡುತ್ತಿದ್ದಾರೆ.