ಮತ ಕೇಳೋ ಉತ್ಸಾಹದಲ್ಲಿ ಬಾತ್ ರೂಮ್ ಗೆ ಎಂಟ್ರಿ ಕೊಟ್ಟ ಶಾಸಕ !! | ಸ್ನಾನ ಮಾಡುತ್ತಿದ್ದ ವ್ಯಕ್ತಿಯ ಬಳಿ ರೇಶನ್ ಕಾರ್ಡ್ ಇದೆಯಾ ಎಂದು ಪ್ರಶ್ನೆ
ಪಂಚ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಚುನಾವಣಾ ಕಣ ರಂಗೇರಿದೆ. ಈ ನಡುವೆ ಜನಪ್ರತಿನಿಧಿಗಳು ಮತದಾರರನ್ನು ಸೆಳೆಯಲು ಮನೆ ಮನೆಗೆ ತೆರಳಿ ಜನರ ಕುಂದು-ಕೊರತೆಗಳನ್ನು ಆಲಿಸುತ್ತಿದ್ದಾರೆ. ಇಂತಹ ಸನ್ನಿವೇಶವೊಂದರಲ್ಲಿ ವಿನೋದಮಯವಾದ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಅದರ ವೀಡಿಯೋ ಇದೀಗ ವೈರಲ್ ಆಗಿದೆ.
ಕಾನ್ಪುರದಲ್ಲಿ ಜನಪ್ರತಿನಿಧಿಯೊಬ್ಬರು ಮನೆ-ಮನೆಗೆ ತೆರಳಿ ಪ್ರಚಾರವನ್ನು ಆರಂಭಿಸಿದ್ದಾರೆ. ವ್ಯಕ್ತಿಯೊಬ್ಬ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿರುವ ಬಿಜೆಪಿ ಶಾಸಕ, ʻನಿನ್ನ ಬಳಿ ರೇಷನ್ ಕಾರ್ಡ್ ಇದೆಯಾ?ʼ ಎಂದು ಪ್ರಶ್ನಿಸಿದ್ದಾರೆ. ಈ ಸನ್ನಿವೇಶದ ದೃಶ್ಯ ಸೆರೆಯಾಗಿದ್ದು, ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಹಲವರು ಈ ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ.
ಕಾನ್ಪುರದ ಬಿಜೆಪಿ ಶಾಸಕ ಸುರೇಂದ್ರ ಮೈಥಾನಿ ಅವರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಜನರೊಂದಿಗೆ ಸಂವಹನ ನಡೆಸುತ್ತಿರುವ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ವೈರಲ್ ಆಗಿರುವ ವೀಡಿಯೋದಲ್ಲಿ, ವ್ಯಕ್ತಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲೇ ಶಾಸಕರು ಆತನ ಬಳಿ ಹೋಗಿ ಕುಂದು-ಕೊರತೆ ಆಲಿಸಿದ್ದಾರೆ. ಕೆಲವು ಪ್ರಶ್ನೆಗಳನ್ನು ಸಹ ಕೇಳಿದ್ದಾರೆ.
ಎಲ್ಲವೂ ಚೆನ್ನಾಗಿದೆಯೇ? ಯಾವುದೇ ವಿಳಂಬವಿಲ್ಲದೇ ಅನುದಾನ ಪಡೆದು ಮನೆ ನಿರ್ಮಿಸಲಾಯಿತೇ? ನಿಮ್ಮ ಬಳಿ ರೇಷನ್ ಕಾರ್ಡ್ ಇದೆಯೇ ಎಂದು ಸ್ನಾನ ಮಾಡುತ್ತಿದ್ದ ವ್ಯಕ್ತಿಯನ್ನು ಶಾಸಕ ವಿಚಾರಿಸಿದ್ದಾರೆ.
ʻಹೌದು, ಹೌದುʼ ಅಂತ ಆ ವ್ಯಕ್ತಿ ತಲೆಗೆ ಶಾಂಪೂ ಹಚ್ಚಿಕೊಂಡು ಸ್ನಾನ ಮಾಡುತ್ತಲೇ ಶಾಸಕರ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದಾನೆ. ಈ ಸನ್ನಿವೇಶದ ಫೋಟೋವನ್ನು ಸಹ ಶಾಸಕ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ ಜೊತೆಗೆ, ವಸತಿ ಯೋಜನೆಯಡಿ ಮನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಫಲಾನುಭವಿಯೊಬ್ಬರ ಮನೆಗೆ ತೆರಳಿ ಅಭಿನಂದಿಸಿದ್ದೇನೆ. ಕಮಲದ ಗುರುತಿಗೆ ಮತ ಹಾಕಿ, ನನ್ನನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.