ಗಂಡನ ಡಾಬಾಗೆ ಬೆಂಕಿ ಹಚ್ಚಲು ಹೆಂಡತಿಯಿಂದಲೇ ಸುಪಾರಿ, ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಅನ್ನುವ ಹಾಗೆ ಅಮಾಯಕನ ಬಲಿ ಪಡೆದ ಹಂತಕರು
ಬೆಂಗಳೂರು ಹೊರವಲಯದಲ್ಲಿರುವ ಸೋಲದೇವನಹಳ್ಳಿಯ ಡಾಬಾಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಡಿ.24 ರಂದು, 2021 ರಂದು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅರ್ಪಿತ್ ಎಂಬುವವರಿಗೆ ಸೇರಿದ ಯು ಟರ್ನ್ ಹೆಸರಿನ ಡಾಬಾಗೆ ಬೆಂಕಿ ಹಚ್ಚಲಾಗಿತ್ತು.
ಈ ವೇಳೆ ಡಾಬಾದಲ್ಲಿದ್ದ ಕೆಲಸಗಾರನ ಮೇಲೆಯೂ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕೆಲಸಗಾರನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಗಂಡ ಅರ್ಪಿತ್ ಸಹ ಒಡೆತನದ ಡಾಬಾಗೆ ಬೆಂಕಿ ಹಚ್ಚಲು ಆತನ ಪತ್ನಿ ಶೀತಲ್ ಸುಪಾರಿ ನೀಡಿರುವ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸೋಲದೇವನಹಳ್ಳಿಯಲ್ಲಿ ದೀಪಕ್, ಸಚಿನ್ ಹಾಗೂ ಅರ್ಪಿತ್ ಮೂವರು ಪಾಲುದಾರಿಕೆಯಲ್ಲಿ ಡಾಬಾ ನಡೆಸುತ್ತಿದ್ದರು.
ಅರ್ಪಿತ್ ಮತ್ತು ಶೀತಲ್ ಮ್ಯಾಟ್ರಿಮೋನಿಯಲ್ ಮೂಲಕ ಪರಿಚಯವಾದವರು. ಆದರೆ ಮದುವೆಯಾದ ನಾಲ್ಕೇ ತಿಂಗಳಲ್ಲಿ ಇಬ್ಬರ ಸಂಸಾರ ಹಳಸಿತ್ತು. ದಿನನಿತ್ಯ ಇಬ್ಬರ ಮಧ್ಯೆ ಸಣ್ಣ ಸಣ್ಣ ವಿಷಯಕ್ಕೂ ಜಗಳ ನಡೆಯುತ್ತಿತ್ತು. ಹೀಗಾಗಿ ಅರ್ಪಿತ್ ಹೆಂಡತಿಯನ್ನು ತನ್ನ ತವರುಮನೆಗೆ ಕಳುಹಿಸಿದ್ದನು. ನಂತರ ಅರ್ಪಿತ್ ತನ್ನ ಡಾಬಾ ಕೆಲಸದಿಂದಾಗಿ ಬಿಜಿಯಾಗಿದ್ದ.
ತವರಿಗೆ ಕಳಿಸಿದ ಪತ್ನಿಯನ್ನು ನೋಡಲು ಅರ್ಪಿತ್ ಹೋಗಿರಲಿಲ್ಲ. ಇದರಿಂದ ಕೋಪಗೊಂಡ ಶೀತಲ್ ಡಾಬಾಗೆ ಬೆಂಕಿ ಹಚ್ಚಲು ಪರಿಚಯದ ರೌಡಿ ಶೀಟರ್ ಮನು ಕುಮಾರ್ ಎಂಬಾತನಿಗೆ ಇಪ್ಪತ್ತು ಸಾವಿರ ನೀಡಿದ್ದಳು. ಡಿ.24 ರಂದು ಮನು ತನ್ನಿಬ್ಬರ ಸಹಚರರಾದ ಮಂಜುನಾಥ್ ಮತ್ತು ಹೇಮಂತ್ ಜೊತೆ ಸೇರಿ ಡಾಬಾಗೆ ಬೆಂಕಿ ಹಚ್ಚಲು ಹೋಗಿದ್ದ.
ಈ ಸಮಯದಲ್ಲಿ ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿದ್ದ ವೇಳೆ ಅಲ್ಲಿಯ ಕೆಲಸಗಾರ ಮನೋಜ್ ಪ್ರಶ್ನೆ ಮಾಡಿದ್ದಾನೆ. ಗಾಬರಿಗೊಂಡ ಆರೋಪಿಗಳು ಡಾಬಾ ಜೊತೆ ಕೆಲಸಗಾರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಸದ್ಯ ಪೊಲೀಸರು ಮನುಕುಮಾರ್, ಮಂಜುನಾಥ್ ಮತ್ತು ಹೇಮಂತ್ ಅವರನ್ನು ಬಂಧಿಸಿದ್ದಾರೆ. ಶೀತಲ್ ನಾಪತ್ತೆಯಾಗಿದ್ದು, ಆಕೆಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.