ಯುಪಿ ಚುನಾವಣೆ : ಬಿಜೆಪಿ ಸೇರಿದ ಕಾಂಗ್ರೆಸ್, ಸಮಾಜವಾದಿ ಪಕ್ಷದ ಶಾಸಕರು | ಸಮಾಜವಾದಿ ಪಕ್ಷ ಸೇರಿದ ಬಿಜೆಪಿ ಶಾಸಕರಿಗೆ ಕೌಂಟರ್
ಉತ್ತರಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಅಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಯುಪಿ ಸರ್ಕಾರದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ ಸಮಾಜವಾದಿ ಪಕ್ಷ ಸೇರ್ಪಡೆಗೊಂಡು ಆಡಳಿತರೂಢ ಬಿಜೆಪಿಗೆ ದೊಡ್ಡ ಶಾಕ್ ನೀಡಿದ್ದರು, ಈ ಬೆಳವಣಿಗೆ ನಡೆದ ಒಂದು ದಿನದ ನಂತರ ಉತ್ತರ ಪ್ರದೇಶದ ಕಾಂಗ್ರೆಸ್ ಶಾಸಕ ನರೇಶ್ ಸೈನಿ ಮತ್ತು ಸಮಾಜವಾದಿ ಪಕ್ಷದ ಶಾಸಕ ಹರಿ ಓಂ ಯಾದವ್ ಅವರು ಬುಧವಾರ ಬಿಜೆಪಿ ಸೇರಿದ್ದಾರೆ.
ಸೈನಿ ಮತ್ತು ಯಾದವ್ ಇಬ್ಬರೂ ಹಿಂದುಳಿದ ಜಾತಿಗಳಿಂದ ಬಂದವರು ಮತ್ತು ಅವರನ್ನು ಸೇರಿಸಿಕೊಳ್ಳುವ ಬಿಜೆಪಿಯ ನಿರ್ಧಾರವು ಒಬಿಸಿಯಲ್ಲಿ ಬಿಜೆಪಿ ಬಲವನ್ನು ಹೆಚ್ಚಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
ಸಮಾಜವಾದಿ ಪಕ್ಷದ ಮಾಜಿ ಶಾಸಕ ಧರ್ಮಪಾಲ್ ಸಿಂಗ್ ಜೊತೆಗೆ ಇಬ್ಬರು ಶಾಸಕರು ಯುಪಿ ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಮತ್ತು ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಇನ್ನೊಂದೆಡೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಬುಧವಾರ ಪಕ್ಷದ ಕೇಂದ್ರ ನಾಯಕರೊಂದಿಗೆ ಸಭೆಯನ್ನು ನಡೆಸಿದ್ದಾರೆ, ರಾಜ್ಯದಲ್ಲ ಏಳು ಹಂತಗಳ ವಿಧಾನಸಭಾ ಚುನಾವಣೆಯ ಆರಂಭಿಕ ಹಂತಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಫೆಬ್ರವರಿ 10ರಂದು ಚುನಾವಣೆ ಅಲ್ಲಿ ಆರಂಭವಾಗಲಿದೆ.