ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಗೆ ಎಸಿಬಿ ದಿಢೀರ್ ದಾಳಿ !! | ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮೂವರು ಅಧಿಕಾರಿಗಳು
ಉಡುಪಿ ಜಿಲ್ಲೆಯ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಎಸಿಬಿ ತಂಡ ದಿಢೀರ್ ದಾಳಿ ಮಾಡಿದ್ದು, ಸಾರ್ವಜನಿಕರೊಬ್ಬರಿಂದ 2.50 ಲಕ್ಷ ರೂಪಾಯಿ ಲಂಚ ಸ್ವೀಕಾರ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಮೂವರು ಅಧಿಕಾರಿಗಳು ಸಿಕ್ಕಿಬಿದ್ದಿದ್ದ ಘಟನೆ ನಡೆದಿದೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಎಂಜಿನಿಯರ್ ಗುರುಪ್ರಸಾದ್, ಪ್ರಾಧಿಕಾರ ಅಧಿಕಾರಿಗಳಾದ ನಯಿಮಾ ಸಯೀದ್ ಮತ್ತು ಪ್ರಸಾದ್‍ನನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಖಾಸಗಿ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಕನ್ವರ್ಷನ್ ಮಾಡಿ ಪರವಾನಿಗೆ ಕೊಡುವ ವಿಚಾರಕ್ಕೆ ಲಂಚ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದ ಆದಿ ಉಡುಪಿಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಗೆ ಎಸ್‍ಪಿ ಸೈಮನ್, ಡಿವೈಎಸ್‍ಪಿ ಮಂಜುನಾಥ್ ಕವರಿ ನೇತೃತ್ವದಲ್ಲಿ ದಾಳಿಯಾಗಿದೆ. ಎಸಿಬಿ ಎಸ್‍ಐ ಸತೀಶ್, ರಫೀಕ್ ಎಂ ದಾಳಿ ಸಂದರ್ಭದಲ್ಲಿ ಜೊತೆಗಿದ್ದರು. ಗುರುಪ್ರಸಾದ್, ನಯಿಮಾ ಸಯೀದ್, ಪ್ರಸಾದ್ ಮೇಲೆ ಹಲವಾರು ಬಾರಿ ಸಾರ್ವಜನಿಕರು ಈ ಹಿಂದೆ ದೂರು ನೀಡಿದ್ದರು. ನಗರಾಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಲಂಚ ಕೊಟ್ಟರೂ ಕೆಲಸ ಮಾಡಿಕೊಡುವುದಿಲ್ಲ ಎಂಬ ಸಾರ್ವಜನಿಕರ ಆರೋಪದಡಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬಲೆ ಬೀಸಿದ್ದಾರೆ.