ಭಾರತ ಹಾಗೂ ಪಾಕಿಸ್ತಾನ ವಿಭಜನೆ ವೇಳೆ ದೂರವಾಗಿದ್ದ ಸಹೋದರರು ಬರೋಬ್ಬರಿ 74 ವರ್ಷಗಳ ಬಳಿಕ ಒಂದಾದರು!! | ಅಣ್ಣತಮ್ಮ ಅಪ್ಪಿಕೊಂಡು, ಆನಂದಭಾಷ್ಪ ಸುರಿಸುತ್ತಿರುವ ಹೃದಯಸ್ಪರ್ಶಿ ವೀಡಿಯೋ ವೈರಲ್

ದೇಶಗಳ ವಿಭಜನೆ ವೇಳೆ ಅದೆಷ್ಟೋ ಕುಟುಂಬದ ಸದಸ್ಯರು ಒಬ್ಬರಿಂದೊಬ್ಬರು ದೂರಾಗಿದ್ದಾರೆ. ಕುಟುಂಬದಿಂದ ದೂರವಾಗಿ ಅದೆಷ್ಟೋ ಯಾತನೆ ಪಟ್ಟವರೂ ಇದ್ದಾರೆ. ಹೀಗೆ ದೂರಾವಾದವರು ಒಂದೊಮ್ಮೆ ಒಂದಾದರೆ ಆ ಕ್ಷಣ ಹೇಗಿರಬೇಡ. ಹಾಗೆಯೇ ಇದೀಗ ಭಾರತ ಹಾಗೂ ಪಾಕಿಸ್ತಾನ ವಿಭಜನೆ ವೇಳೆ ದೂರವಾಗಿದ್ದ ಸಹೋದರರು ಮತ್ತೆ 74 ವರ್ಷಗಳ ಬಳಿಕ ಒಂದಾದ ಭಾವನಾತ್ಮಕವಾದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಮೊಹಮ್ಮದ್ ಸಿದ್ದಿಕ್ ಮತ್ತು ಅವರ ಹಿರಿಯ ಸಹೋದರ ಹಬೀಬ್ ಬೇರೆ ಆಗಿದ್ದರು. ಈ ವೇಳೆ ಇನ್ನೂ ಮಗುವಾಗಿದ್ದ ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದಲ್ಲಿಯೇ ಉಳಿದುಕೊಂಡರು. ಆದರೆ ಹಬೀಬ್ ಅವರು ಭಾರತದಲ್ಲಿಯೇ ವಾಸಿಸುತ್ತಾ ಬೆಳೆದರು.

ಎರಡು ದೇಶಗಳ ಮಧ್ಯೆ ಹಂಚಿ ಹೋಗಿದ್ದ ಈ ಇಬ್ಬರು ಸಹೋದರರು ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‍ನಿಂದ ಭಾರತಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್‌ ನಲ್ಲಿ ಮತ್ತೆ ಒಂದಾಗಿದ್ದಾರೆ. ಕುಟುಂಬಸ್ಥರು, ನೆರೆದವರ ಕಣ್ಣುಗಳಲ್ಲಿ ಆನಂದಬಾಷ್ಪ ತುಂಬಿ ತುಳುಕುತ್ತಿತ್ತು. ಪರಸ್ಪರ ತಬ್ಬಿಕೊಂಡು 74 ವರ್ಷದ ಅಗಲಿಕೆ ಅಂತ್ಯಗೊಳಿಸಿದ ಆನಂದದಿಂದ ಕಣ್ಣೀರು ಸುರಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಹೃದಯಸ್ಪರ್ಶಿ ವೀಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಹೋದರರ ಭೇಟಿಯ ಖುಷಿ ಕಂಡು ಖುಷಿಯಿಂದ ಮನೆಯಲ್ಲೇ ಆನಂದ ಭಾಷ್ಪ ಸುರಿಸಿದ ಮಂದಿ ಎಷ್ಟೋ.

Leave A Reply

Your email address will not be published.