ಒಂಟೆಗಳಿಗಾಗಿಯೇ ಇದೆ ಸೌದಿಯಲ್ಲೊಂದು ಐಷಾರಾಮಿ ಫೈವ್ ಸ್ಟಾರ್ ಹೋಟೆಲ್ !ಏನದರ ಸ್ಪೆಷಾಲಿಟಿ ಗೊತ್ತಾ ?
‘ಮರುಭೂಮಿಯ ಹಡಗು’ ಎಂದೇ ಕರೆಯಲಾಗುವ ಒಂಟೆಗಳು ಸೌದಿ ಅರೇಬಿಯಾದ ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಪ್ರಾಣಿಗಳು.
ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿಯೇ 5 ಸ್ಟಾರ್ ಹೋಟೆಲ್ ನ್ನು ತೆರೆಯಲಾಗಿದೆ. ಹೌದು, ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿಯೇ ವಿಶ್ವದ ಮೊದಲ 5 ಸ್ಟಾರ್ ಹೋಟೆಲ್ ನ್ನು ತೆರೆದಿದೆ. ಇದೇನು ಅಂತೀರಾ ? ಮುಂದೆ ಓದಿ…ನಿಮ್ಮ ಕುತೂಹಲ ಇನ್ನಷ್ಟೂ ಹೆಚ್ಚಾಗುತ್ತೆ!
ಸೌದಿ ರಾಜಧಾನಿ ರಿಯಾದ್ ನ ಈಶಾನ್ಯ ಭಾಗದ ಮರುಭೂಮಿಯಲ್ಲಿ ಒಂದೂವರೆ ತಿಂಗಳ ಕಾಲ ನಡೆಯುವ ಕಿಂಗ್ ಅಬ್ದುಲ್ ಅಜೀಜ್ ಒಂಟೆ ಉತ್ಸವವು ಒಂಟೆಗಳಿಗೆ, ದೇಶದ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ.
ಹೌದು, ಒಂಟೆಗಳಿಗಾಗಿಯೇ ತೆರೆಯಲಾಗಿರುವ ‘ ಟ್ಯಾಟ್ ಮ್ಯಾನ್ ‘ ಎಂಬ ಹೆಸರಿನ ಪಂಚತಾರಾ ಹೋಟೆಲ್ ನಲ್ಲಿ ಒಂಟೆಗಳು ವಿಶ್ರಾಂತಿ ಪಡೆಯುತ್ತದೆ. ಒಂಟೆಗಳಿಗಾಗಿಯೇ ತೆರೆದಿರುವ ವಿಶ್ವದ ಮೊದಲ ಹೋಟೆಲ್ ಇದಾಗಿದೆ. ಒಂಟೆಗಳು ಈ ಹೋಟೆಲ್ ನಲ್ಲಿ ಒಂದು ದಿನ ತಂಗಲು 400 ಸೌದಿ ರಿಯಾಲ್ ಗಳನ್ನು ( ಸುಮಾರು 7900 ಭಾರತೀಯ ರೂಪಾಯಿಗಳು) ನೀಡಬೇಕಾಗುತ್ತದೆ.
ಇಲ್ಲಿ ಒಂಟೆಗಳಿಗಾಗಿ ರೂಂ ಸರ್ವೀಸ್, ಹೌಸ್ ಕೀಪಿಂಗ್, ಒಂಟೆಗಳ ಆರೈಕೆ, ಕಾವಲು ಮತ್ತು ಭದ್ರತೆ ಮೊದಲಾದ ಸೇವೆಗಳನ್ನು ನೀಡಲಾಗುತ್ತದೆ. ಒಂಟೆಗಳಿಗೆ ಉತ್ತಮ ಆಹಾರ, ಬಿಸಿ ಹಾಲು ನೀಡುವುದರ ಜೊತೆಗೆ ಸೌಂದರ್ಯದ ಬಗ್ಗೆನೂ ಕಾಳಜಿ ವಹಿಸಲಾಗುತ್ತದೆ. ಫೈವ್ ಸ್ಟಾರ್ ಹೋಟೆಲಿನ ಆತಿಥ್ಯದಲ್ಲಿ ಒಂಟೆಗಳು ಒಳ್ಳೆಯ ಆಹಾರ ಸೇವಿಸಿ ಮೆಲುಕುಹಾಕುತ್ತಾ ಕಾಲುಚಾಚಿ ಮಲಗುತ್ತವೆ. ಹದವಾದ ಬಿಸಿಯಾದ ನೀರಿನಿಂದ ಅಭ್ಯಂಜನ ಮಾಡಿಸಿಕೊಳ್ಳುತ್ತವೆ. ವರ್ಷವಿಡಿ ದಣಿವಾರಿಸಿ ಭಾರಹೊತ್ತು ದುಡಿದ ಮೈಗಳಿಗೆ ಒಂದಷ್ಟು ಕಾಲ ನೆಮ್ಮದಿಯ ಜೀವನ. ಹಾಗೆಂದು ಸೌದಿ ಕ್ಯಾಮೆಲ್ ಕ್ಲಬ್ ನ ವಕ್ತಾರ ಮೊಹಮ್ಮದ್ ಅಲ್ – ಹರ್ಬಿ ಹೇಳಿದ್ದಾರೆ.
ಸೌದಿ ಅರೇಬಿಯಾದಲ್ಲಿ 6 ನೇ ಕಿಂಗ್ ಅಬ್ದುಲ್ ಅಜೀಜ್ ಒಂಟೆ ಉತ್ಸವಕ್ಕಾಗಿ ಈ ಹೋಟೆಲ್ ನ್ನು ತೆರೆಯಲಾಗಿದೆ.
ಈ ಹೋಟೆಲ್ ನಲ್ಲಿ ಪ್ರಸ್ತುತ 50 ಕ್ಕೂ ಹೆಚ್ಚು ಜನರು ತಮ್ಮ ಒಂಟೆಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಸೌದಿ ಅರೇಬಿಯಾದ ಬದೌಯಿನ್ ಬುಡಕಟ್ಟಿನ ಆಚರಣೆಯಾದ ಕಿಂಗ್ ಅಬ್ದುಲ್ ಅಜೀಜ್ ಒಂಟೆ ಉತ್ಸವದ ಆರನೇ ವೃತ್ತಿ ಇದಾಗಿದೆ. ಈ ಉತ್ಸವದ ಪ್ರಮುಖ ಆಕರ್ಷಣೆಯೆಂದರೆ ಒಂಟೆ ಓಟ, ಒಂಟೆ ಸೌಂದರ್ಯ ಸ್ಪರ್ಧೆ ಮತ್ತು ಮಾರಾಟ. ಇದರಲ್ಲಿ ಗೆದ್ದ ಒಂಟೆಯ ಮಾಲೀಕರಿಗೆ $ 66 ಮಿಲಿಯನ್ ಬಹುಮಾನವನ್ನು ಪಡೆಯುತ್ತಾರೆ.