ಬೆಳ್ತಂಗಡಿ: ಕಕ್ಕಿಂಜೆಯ ಲಾಡ್ಜ್ ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆಗೆ ಶರಣು
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಹೋಟೆಲ್‌ನಲ್ಲಿ ನೇಣಿಗೆ ಶರಣಾದ ಘಟನೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಕುಮಾರ್ ಎಮ್ ಎಸ್ (36) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಕ್ಕಿಂಜೆಯ ಸಾಲಿಯಾನ್ ವಸತಿ ಗೃಹದಲ್ಲಿ ಕೊಠಡಿ ಬಾಡಿಗೆ ಪಡೆದು ಈ ಕೃತ್ಯ ಎಸಗಿದ್ದಾರೆ.
ಕುಮಾರ್ ರವರು ಮಂಗಳವಾರ ಬೆಳಗ್ಗೆ ಮನೆ ಬಿಟ್ಟಿದ್ದರು. ನಿನ್ನೆ ಬೆಳಗ್ಗೆ ಸುಮಾರು 8 ಗಂಟೆಗೆ ತಮ್ಮ ಪತ್ನಿಯ ಬಳಿ ಧರ್ಮಸ್ಥಳದಿಂದ 10 ಕಿ.ಮಿ ದೂರ ಇರುವುದಾಗಿ ತಿಳಿಸಿದ್ದರು. ಈ ಬಗ್ಗೆ ಅನುಮಾನಗೊಂಡ ಪತ್ನಿ ಮತ್ತು ಆತನ ಸ್ನೇಹಿತರು ಧರ್ಮಸ್ಥಳದ ಕಡೆ ಹುಡುಕಾಡುತ್ತಾ ಬಂದಿದ್ದು, ಕಕ್ಕಿಂಜೆ ಸಾಲಿಯಾನ್ ವಸತಿ ಗೃಹದ ಮುಂದೆ ಕುಮಾರ್ ಅವರು ತೆಗೆದುಕೊಂಡು ಬಂದಿದ್ದ ಮೋಟಾರ್ ಸೈಕಲ್ ನ್ನು ನೋಡಿ ವಸತಿ ಗೃಹದ ಮೇಲ್ವಿಚಾರಕರನ್ನು ವಿಚಾರಿಸಿದಾಗ, ವಸತಿಗೃಹದ ಸಿಬ್ಬಂದಿಗಳು ಕುಮಾರ್ ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಅಂತೆಯೇ ವಸತಿ ಗೃಹದ ಮೇಲ್ವಿಚಾರಕರೊಂದಿಗೆ ಹೋಗಿ ನೋಡಿದಾಗ, ಕುಮಾರ್ ತಾನು ಪಡೆದುಕೊಂಡ ಕೊಠಡಿ ಟಾರಸಿಗೆ ಅಳವಡಿಸಿದ ಕಬ್ಬಿಣದ ಕೊಂಡಿಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೃತ ಕುಮಾರ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿಕೊಂಡಿದ್ದರು. ಮದುವೆಯಾಗಿ ಒಂದು ಗಂಡು ಹಾಗೂ ಹೆಣ್ಣು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದರು. ಅವರ ವ್ಯವಹಾರಕ್ಕಾಗಿ ಖಾಸಗಿ ವ್ಯಕ್ತಿಗಳಿಂದ ಕೈ ಸಾಲವನ್ನು ಪಡೆದಿದ್ದು, ಕೈ ಸಾಲವನ್ನು ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಅದಲ್ಲದೇ ಮೃತರ ಮರಣದಲ್ಲಿ ಬೇರಾವುದೇ ಸಂಶಯ ಇರುವುದಿಲ್ಲ ಎಂದು ಕೂಡ ಮನೆ ಮಂದಿ ತಿಳಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.